ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಫೆ.15ರಂದು ಜರುಗಲಿರುವ ಸಂತ ಶ್ರೀ ಸೇವಾಲ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲೂಕಾಡಳಿತದಿಂದ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ ಅನಿಲ ಬಡಿಗೇರ ತಿಳಿಸಿದರು.
ಅವರು ಸೋಮವಾರ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ ಜಯಂತಿ ಆಚರಣೆಯ ಪ್ರಯುಕ್ತ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೆ.15ರಂದು ತಹಸೀಲ್ದಾರ ಕಚೇರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಸರಕಾರದ ನಿಯಮಾನುಸಾರ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಜಯಂತಿ ಆಚರಣೆಯನ್ನು ಮಾಡಬೇಕು. ತಹಸೀಲ್ದಾರ ಕಚೇರಿಯಲ್ಲಿ ಜರುಗುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ಆಗಮಿಸಿ ಜಯಂತಿಯನ್ನು ಯಶಸ್ವಿಗೊಳಿಸಬೇಕು. ಸಭೆಗೆ ಗೈರು ಉಳಿದವರಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದರು.
ಸಮಾಜದ ಮುಖಂಡರಾದ ಎಂ.ಕೆ. ಲಮಾಣಿ, ಜಾನು ಲಮಾಣಿ, ದೇವಪ್ಪ ಲಮಾಣಿ ಮಾತನಾಡಿ, ಸರಕಾರದ ನಿರ್ದೆಶನದಂತೆ ಫೆ.15ರಂದು ಎಲ್ಲ ಸರಕಾರಿ ಕಚೇರಿಗಳಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಜಯಂತಿ ಆಚರಣೆ ಮಾಡಲಾಗುವುದು. ತದನಂತರ ಸಮಾಜದ ವತಿಯಿಂದ ಅದ್ಧೂರಿಯಾಗಿ ಜಯಂತಿ ಆಚರಣೆ ಮಾಡಲಾಗುವುದು ಎಂದರು.
ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ, ಪಿಆರ್‌ಇಡಿ ಮಾರುತಿ ರಾಠೋಡ, ಬಿಇಓ ನಾಯ್ಕ, ಎಡಿಎ ರೇವಣೆಪ್ಪ ಮನಗೂಳಿ, ಸಮಾಜ ಕಲ್ಯಾಣಾಧಿಕಾರಿ ಗೋಪಾಲ ನಾಯ್ಕ, ಬಿಸಿಎಂನ ಮರಿಗೌಡ ಸುರಕೋಡ, ಈರಣ್ಣ ಚವ್ಹಾಣ, ಎಚ್.ಎಸ್. ರಾಮನಗೌಡ, ಲಕ್ಷ್ಮಣ ಲಮಾಣಿ, ತಿಪ್ಪಣ್ಣ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.