ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಮ್ಮ ರಾಷ್ಟçದ ಶ್ರೇಷ್ಠ, ಶ್ರೀಮಂತ ಪರಂಪರೆಯನ್ನು ಪ್ರಾಚ್ಯ ಸ್ಮಾರಕಗಳು ಇಂದಿಗೂ ಪ್ರತಿಬಿಂಬಿಸುತ್ತಿವೆ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಪ್ರಾಚೀನ ಪರಂಪರೆಯ ಬಗ್ಗೆ ಮಾಹಿತಿ ನೀಡುವದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಪುರಸಭಾ ಸದಸ್ಯ ಬಸವರಾಜ ಓದುನವರ ಅಭಿಪ್ರಾಯಪಟ್ಟರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಲಕ್ಷ್ಮೇಶ್ವರದ ಐತಿಹಾಸಿಕ ಶಂಖಬಸದಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಶ್ರೇಷ್ಠ ಪ್ರಾಚ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾಗಿದೆ. ಅದನ್ನು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳ ಮುಖಾಂತರ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ ಎಂದರು.
ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ್ ಮಾತನಾಡಿ, ನಾಲ್ಕು ಗೋಡೆಯ ಮಧ್ಯೆ ಶಿಕ್ಷಣ ಸೀಮಿತವಾಗಬಾರದು. ಜೊತೆಗೆ ಇಂತಹ ಪ್ರಾಚೀನ ಪರಂಪರೆಯನ್ನು ಅರಿಯುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಮಕ್ಕಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಕಾಣಬಹುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಬಿ.ಆರ್.ಪಿ ಈಶ್ವರ ಮೆಡ್ಲೇರಿ, 6ನೇ ಶತಮಾನದಲ್ಲಿಯೇ ನಿರ್ಮಾಣವಾದ ಶಂಖಬಸದಿಯು ಪುಲಿಗೆರೆ ಸೋಮನಾಥ ದೇವಸ್ಥಾನದಂತೆಯೇ ಅತ್ಯಂತ ಹಳೆಯ ಇತಿಹಾಸ ಹೊಂದಿದೆ. ಇಂತಹ ಪ್ರಾಚೀನ ಸ್ಮಾರಕದಲ್ಲಿ ಪ್ರಾಚ್ಯ ಪ್ರಜ್ಞೆ ಸ್ಪರ್ಧೆ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ನಮ್ಮ ಪ್ರಾಚೀನತೆಯ ಹಿರಿಮೆಯನ್ನು ಜಾಗೃತಗೊಳಿಸುವುದು ಇಲಾಖೆಯ ಉದ್ದೇಶವಾಗಿದೆ. ಜೊತೆಗೆ ತಾಲೂಕಿನ ವಿದ್ಯಾರ್ಥಿಗಳು ಪ್ರತಿ ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಅಭಿಮಾನದ ವಿಷಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಂಖಬಸದಿ ಟ್ರಸ್ಟ್‌ನ ಕಾರ್ಯದರ್ಶಿ ಮಹಾವೀರಗೌಡ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಪುರಸಭೆಯ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ವಿಶ್ರಾಂತ ಶಿಕ್ಷಕ ಸಿ.ಜಿ. ಹಿರೇಮಠ, ಶಿಕ್ಷಕ ಎಚ್.ಎಂ. ಗುತ್ತಲ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಎ.ಎಂ. ಅಕ್ಕಿ, ಜೈನ ಸಮಾಜದ ವಾಸು ಪಾಟೀಲ ವೇದಿಕೆಯಲ್ಲಿದ್ದರು.
ಸ್ಪರ್ಧೆಯ ನಿರ್ಣಾಯಕರಾಗಿ ಸಿ.ಜಿ. ಹಿರೇಮಠ, ನಾಗರಾಜ ಮಜ್ಜಿಗುಡ್ಡ, ಸಿಆರ್‌ಪಿಗಳಾದ ನವೀನ ಅಂಗಡಿ, ಗಿರೀಶ್ ನೇಕಾರ, ಸತೀಶ ಬೋಮಲೆ, ಉಮೇಶ ನೇಕಾರ, ಚಂದ್ರಶೇಖರ ವಡಕಣ್ಣವರ, ಎನ್.ಎನ್. ಸಾವಿರಕುರಿ, ಕೆ.ಪಿ. ಕಂಬಳಿ, ಜ್ಯೋತಿ ಆಗಮಿಸಿದ್ದರು.
ಸಂಗಮೇಶ ಅಂಗಡಿ ವಂದಿಸಿದರು. ಶಂಖಬಸದಿ ಟ್ರಸ್ಟ್ ಕಮಿಟಿಯ ನಂದಕುಮಾರ ಪಾಟೀಲ, ಸುನಿಲ ಕುಮಾರ ಪಾಟೀಲ, ಪ್ರಕಾಶ ಪಾಟೀಲ ಹಾಗೂ ವಿವಿಧ ಪ್ರೌಢಶಾಲೆಗಳ ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಾಚ್ಯ ಪ್ರಜ್ಞೆ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳಿಗಾಗಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ 23 ಪ್ರೌಢಶಾಲೆಗಳ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು 1500 ವರ್ಷಗಳ ಇತಿಹಾಸ ಇರುವ ಪ್ರಾಚೀನ ಸ್ಮಾರಕ ಶಂಖಬಸದಿ ಸುತ್ತಮುತ್ತ ಅಭಿಮಾನದಿಂದ ಸ್ಪರ್ಧಿಸಿ ಸಂಭ್ರಮಿಸಿದರು.