ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಂದಿನ ದಿನಗಳಲ್ಲಿ ಬಹುತೇಕ ಎಲ್ಲರೂ ಹಿಂದೂ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ವಾಲುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಇನ್ನಾದರೂ ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅಳಿಸಿ, ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂದು ಹೆಬ್ಬಳ್ಳಿ ಚೈತನ್ಯಾಶ್ರಮದ ಶ್ರೀ ದತ್ತಾವಧೂತರು ಹೇಳಿದರು.
ಸಮೀಪದ ನಿಡಗುಂದಿಯ ಶ್ರೀ ಹನುಮಂತ ದೇವಸ್ಥಾನದಲ್ಲಿ ಜರುಗಿದ 11 ತಾಸುಗಳ ಹನುಮಾನ್ ಚಾಲೀಸಾ ಪಠಣದ ಮುಕ್ತಾಯ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ಇಲ್ಲದ ನೆಮ್ಮದಿಯನ್ನು ಹುಡುಕಲು ನಾವು ಪ್ರಯತ್ನಿಸುತ್ತೇವೆ. ಆಧ್ಯಾತ್ಮವಿಲ್ಲದೆ ನೆಮ್ಮದಿಗೆ ಅರ್ಥವೇ ಇಲ್ಲ. ಜೀವನದಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಂಡರೆ ಮನಸ್ಸಿಗೆ ನೆಮ್ಮದಿಯ ಜೊತೆಗೆ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. ನಮ್ಮತನವನ್ನು ಮರೆತು ನಾವು ಇನ್ನಾವುದೋ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿರುವುದು ನಮ್ಮ ವಿನಾಶವನ್ನು ತೋರಿಸುತ್ತದೆ. ನಾವು ವಿನಾಶದಿಂದ ಅವಿನಾಶದತ್ತ ಸಾಗಲು ನಮಗೆ ಆಧ್ಯಾತ್ಮ ಸಹಾಯ ಮಾಡುತ್ತದೆ ಎಂದರು.
ಹನುಮಂತ ಶಕ್ತಿಶಾಲಿ ದೇವರು. ಹನುಮಂತನನ್ನು ಪೂಜಿಸುವುದರಲ್ಲಿ ಭಾರತ ದೇಶದಲ್ಲಿ ಯಾವುದೇ ಭೇದಭಾವವಿಲ್ಲ. ರಾಮಾಯಣದಲ್ಲಿ ಶ್ರೀರಾಮನನ್ನು ಬಿಟ್ಟರೆ ಮತ್ತೊಂದು ಮಹತ್ವದ, ಶಕ್ತಿಯುತ ಪಾತ್ರವೆಂದರೆ ಅದು ಹನುಮಂತ. ಹನುಮಂತನ ಸ್ಮರಣೆಯಿಂದ ನಮ್ಮ ಅನೇಕ ದೋಷಗಳು ದೂರವಾಗುತ್ತವೆ. ಆದ್ದರಿಂದ ನಾವೀಗ ಹನುಮಾನ್ ಚಾಲೀಸಾ ಪಠಣವನ್ನು ಎಲ್ಲೆಡೆಗೆ ಹಮ್ಮಿಕೊಳ್ಳುತ್ತಿದ್ದೇವೆ. ಇಲ್ಲಿ ಜಾತಿ, ಮತ, ಪಂಥದ ಭೇದಭಾವವಿಲ್ಲ. ಯಾರು ಬೇಕಾದರೂ ಬಂದು ಈ ಪಠಣೆಯಲ್ಲಿ ಪಾಲ್ಗೊಂಡು ಪುಣ್ಯ ವಿಶೇಷವನ್ನು ಗಳಿಸಿಕೊಳ್ಳಬಹುದೆಂದರು.
ಹನುಮಾನ್ ಚಾಲೀಸಾ ಪಠಣದಲ್ಲಿ ರಂಗಣ್ಣ ಕುಲಕರ್ಣಿ ಪರಿವಾರದವರು, ರೋಣ, ನರೇಗಲ್ಲ, ಗಜೇಂದ್ರಗಡ ಮತ್ತು ಸುತ್ತಲಿನ ಗ್ರಾಮಗಳ ಅನೇಕ ಭಕ್ತರು ಪಾಲ್ಗೊಂಡಿದ್ದರು. ನಿವೃತ್ತ ಮನುಖ್ಯ ಶಿಕ್ಷಕ ಅರುಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿಡಗುಂದಿಯಲ್ಲಿನ ಹನುಮಾನ್ ಮಂದಿರ ನಮಗೆ ಪರಿಚಯವಾದದ್ದು ಭಕ್ತರಾದ ರಂಗಣ್ಣ ಕುಲಕರ್ಣಿಯವರಿಂದ. ಮೊದಲ ದಿನವೇ ನಮಗೆ ಇದನ್ನೊಂದು ಭವ್ಯ ಹನುಮಾನ್ ಮಂದಿರ ಮಾಡಬೇಕೆಂಬ ಇಚ್ಛೆಯಾಗಿದೆ. ಅದಕ್ಕೆ ಸಮಯ ಕೂಡಿ ಬಂದರೆ ಖಂಡಿತ ಈ ಹನುಮಾನ್ ಮಂದಿರ ಈ ಭಾಗದಲ್ಲಿನ ವಿಶೇಷತೆಯುಳ್ಳ ಹನುಮಾನ್ ಮಂದಿರವಾಗಲಿದೆ. ಅದಕ್ಕೆ ಪೂರಕವಾಗಿ ಇಂತಹ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಶ್ರೀ ದತ್ತಾವಧೂತರು ಹೇಳಿದರು.