ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಾಟಕ ನಮ್ಮ ಜೀವನವನ್ನು ಪ್ರತಿಬಿಂಬವಾಗಿಸಿ ನಮಗೆ ತೋರಿಸುತ್ತದೆ. ನಮ್ಮ ಪಾತ್ರವನ್ನೇ ಕಲಾವಿದರು ಅಭಿನಯಿಸಿ ತೋರಿಸುತ್ತಾರೆ. ನಾಟಕಗಳು ಜೀವನದ ಮೌಲ್ಯಗಳನ್ನು ಸಾರುತ್ತವೆ. ಆದ್ದರಿಂದ ನಾಟಕ ಕಲೆಯನ್ನು ಉಳಿಸಿ-ಬೆಳೆಸುವ ಕೆಲಸವಾಗಬೇಕಿದೆ ಎಂದು ರೋಣ ಪುರಸಭೆಯ ಸದಸ್ಯ, ಯುವ ಧುರೀಣ ಮಿಥುನ್ ಜಿ. ಪಾಟೀಲ ಹೇಳಿದರು.
ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿ ನವಲಗುಂದದ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘದವರು ಪ್ರಾರಂಭಿಸಿರುವ ನಾಟಕ `ರತ್ನ ಮಾಂಗಲ್ಯ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದಭಿರುಚಿಯ ನಾಟಕಗಳನ್ನು ನೋಡುವುದಿದ್ದರೆ ಅದು ಉತ್ತರ ಕರ್ನಾಟಕದಲ್ಲಿ ಮಾತ್ರ. ಹಿಂದೆ ಅದೆಂತಹ ಕಂನಿಗಳಿದ್ದವು ಎಂಬುದನ್ನು ನೆನೆಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಸುಳ್ಳದ ಕಂಪನಿ, ಗುಡಗೇರಿ ಕಂಪನಿ, ಸೂಡಿ ಕಂಪನಿ ಇತ್ಯಾದಿಗಳು ಸಿನಿಮಾಗಳನ್ನೂ ಮೀರಿಸುವಂತೆ ನಾಟಕ ಪ್ರದರ್ಶನ ಮಾಡಿದ್ದನ್ನು ನೋಡಿದ್ದೇವೆ. ಅಂದಿನ ದಿನಗಳು ನಾಟಕ ಕಂಪನಿಗಳಿಗೆ ಸುವರ್ಣ ಯುಗಗಳಾಗಿದ್ದವು. ಆದರೆ ಇಂದು ನಾಟಕಗಳ ಸ್ಥಿತಿ ಅಧೋಗತಿಗಿಳಿದಿದೆ. ಇದಕ್ಕೆ ಪ್ರೇಕ್ಷಕರ ಅಭಿರುಚಿ ಬೇರೆಯಾಗಿರುವುದೇ ಕಾರಣವಾಗಿದೆ ಎಂದು ಹೇಳಿ ಕಂಪನಿಗೆ ಧನ ಸಹಾಯ ನೀಡಿದರು.
ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ನಮ್ಮೂರಿಗೆ ಬಂದಿರುವ ಈ ನಾಟಕ ಕಂಪನಿಯನ್ನು ಸಲಹುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಲ್ಲಿನ ಕಲಾವಿದರೆಲ್ಲ ಹೊಟ್ಟೆ ತುಂಬಾ ಉಂಡು, ನಲಿದು ಹೋಗುವಂತೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದ್ದು, ಅತ್ಯಂತ ಸುಂದರವಾಗಿ ನಾಟಕವಾಡುವ ಈ ಕಲಾವಿದರನ್ನು ನಾವೆಲ್ಲರೂ ನಾಟಕ ನೋಡುವ ಮೂಲಕ ಪ್ರೋತ್ಸಾಹಿಸೋಣ ಎಂದರು.
ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ನರೇಗಲ್ಲ ಪಟ್ಟಣವು ಎಂದಿನಿಂದಲೂ ಕಲೆಗಳ ತವರೂರಾಗಿದೆ. ಇಲ್ಲಿ ಕಲಾಕಾರರಿಗೆ ಎಂದಿಗೂ ಬೆಲೆ ಇದ್ದೇ ಇದೆ. ಆದ್ದರಿಂದ ಈ ನಾಟಕ ಕಂಪನಿ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಅಬ್ಬಿಗೇರಿಯ ಯಲ್ಲಾ ಲಿಂಗೇಶ್ವರ ಮಠದ ಶ್ರೀ ಬಸವರಾಜ ದೇವರು ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಮಲ್ಲನಗೌಡ ಪಾಟೀಲ, ಬಸವರಾಜ ವಂಕಲಕುಂಟಿ, ಶಿವನಗೌಡ ಪಾಟೀಲ, ಸದಸ್ಯ ಕಳಕನಗೌಡ ಪೊಲೀಸ್‌ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ವಿ.ವಿ. ಅಣ್ಣಿಗೇರಿ ನಿರ್ವಹಿಸಿದರು.
ಸಂಘದ ಮಾಲೀಕ ಪ್ರವೀಣ ಬಾಗಲಕೋಟೆ ಮಾತನಾಡಿ, ನಮ್ಮನ್ನು ಕಾಪಾಡುತ್ತೀರಿ ಎಂಬ ಭರವಸೆಯೊಂದಿಗೆ ನಿಮ್ಮೂರಿಗೆ ಬಂದಿದ್ದೇವೆ. ಪಟ್ಟಣದ ಮತ್ತು ಸುತ್ತಲಿನ ಗ್ರಾಮಗಳ ಕಲಾಪೋಷಕರು ನಮ್ಮನ್ನು ಆಶೀರ್ವದಿಸಬೇಕೆಂದರು.