ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ನಮ್ಮ ಪುರಾತನ ಕಾಲದ ಮೌಲ್ಯಯುತ ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಅಧೀಕ್ಷಕ ಡಾ. ದೇವರಾಜು ಎಸ್.ಎಂ ಹೇಳಿದರು.
ಇಲ್ಲಿಯ ಪ್ರಾಚ್ಯ ವಸ್ತು ಸಂಗ್ರಾಲಯದ ಕೇಂದ್ರ ಸಂರಕ್ಷಿತ ಸ್ಮಾರಕವಾದ ಬ್ರಹ್ಮ ಜಿನಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಧಾರವಾಡ ವಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಂಪರಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಾತನ ಕಾಲದ ವಾಸ್ತು ಶಿಲ್ಪ ಕಲೆಯು ಬೆಲೆಯುಳ್ಳದಾಗಿದ್ದು, ಸುಂದರ ಕೆತ್ತನೆಯಿಂದ ಕೂಡಿವೆ. ಅವುಗಳನ್ನು ಸಂರಕ್ಷಿಸಲು ವಿದ್ಯಾರ್ಥಿಗಳು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ತಮ್ಮೂರಿನ ಇತಿಹಾಸ, ಶಿಲ್ಪಕಲೆ, ದೇವಾಲಯಗಳ ಕುರಿತು ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ಪ್ರವಾಸಿಗರು ತಮ್ಮ ಗ್ರಾಮಕ್ಕೆ ಬಂದಾಗ ತಾವು ಅವರಿಗೆ ಮಾಹಿತಿ ನೀಡಬಹುದು. ನ.೧೯ ರಿಂದ ೨೫ರವರೆಗೂ ವಿಶ್ವ ಪರಂಪರಾ ಸಪ್ತಾಹವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದ್ದು, ಇದರ ಮುಖ್ಯ ಉದ್ದೇಶವೆಂದರೆ, ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಸ್ಮಾರಕಗಳ ಸಂರಕ್ಷಣೆ ಮತ್ತು ಮಹತ್ವ ಕುರಿತಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಹೆಚ್ಚಿಸುವುದಾಗಿದೆ ಎಂದು ವಿವರಿಸಿದರು.
ದೈಹಿಕ ಶಿಕ್ಷಕಿ ಜ್ಯೋತಿ ಜೈಶೀಲಾ ಉಪಸ್ಥಿತರಿದ್ದರು. ಹಿರಿಯ ಸಂರಕ್ಷಣಾ ಅಧಿಕಾರಿ ಉಮೇಶ ಸ್ವಾಗತಿಸಿದರು. ಸ್ಮಾರಕ ಪ್ರಚಾರಕ ಸುರೇಶ ಪಾಪಳೆ ವಂದಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಯವರು ಭಾಗವಹಿಸಿದ್ದರು.