ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪೊಲೀಸ್ ಘಟಕದ ತಾಂತ್ರಿಕ ವಿಭಾಗದ ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಎ.ಆರ್.ಎಸ್.ಐ) ಗುರುರಾಜ್ ಮಹಾದೇವಪ್ಪ ಬೂದಿಹಾಳ ಅವರು 2025ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಜಿ.ಎಂ. ಬೂದಿಹಾಳರು 1999ರಿಂದ ಗದಗ ಜಿಲ್ಲೆಯಲ್ಲಿ ಸಶಸ್ತ್ರ ಪೊಲೀಸ್ ಪೇದೆಯಾಗಿ ಸೇವೆ ಆರಂಭಿಸಿ, ಪ್ರಸ್ತುತ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದಲ್ಲಿ ಎ.ಆರ್.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಕಂಪ್ಯೂಟರ್, ತಾಂತ್ರಿಕ ವಿಭಾಗ, ವೇತನ ಶಾಖೆ, ಡಿ.ಸಿ.ಆರ್.ಬಿ, ಎಂ.ವಿ.ವಿ.ಸಿ ಮತ್ತು ಥರ್ಡ್ ಐ ವಿಭಾಗಗಳಲ್ಲಿ ನಿಖರ ಮತ್ತು ನಿಷ್ಠೆಯ ಕಾರ್ಯನಿರ್ವಹಣೆಯ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಿಡಿಆರ್, ಐಪಿಡಿಆರ್, ಟಾವರ್ ಡಂಪ್ ವಿಶ್ಲೇಷಣೆಯಂತಹ ತಾಂತ್ರಿಕ ಕೌಶಲ್ಯಗಳನ್ನು ಬಳಸಿಕೊಂಡು ಗಂಭೀರ ಅಪರಾಧ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವಲ್ಲಿ ಬೂದಿಹಾಳರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲದೇ, ಪೊಲೀಸ್ ಒನ್, ಕರ್ನಾಟಕ ಒನ್ ಮತ್ತು ತಂತ್ರಾಂಶಗಳ ಅಭಿವೃದ್ಧಿಗೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಶ್ಲಾಘನೀಯ ಕೊಡುಗೆ ನೀಡಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ `ಥರ್ಡ್ ಐ’ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸ್ಥಾಪನೆಗೆ ಅವರು ಶ್ರಮಿಸಿದ್ದಾರೆ. ಅಪ್ಲಿಕೇಶನ್ ಅಭಿವೃದ್ಧಿಪಡಿಸಿ, ಕಳೆದುಹೋಗಿದ್ದ ಮೊಬೈಲ್‌ಗಳನ್ನು ಬ್ಲಾಕ್ ಮಾಡುವ ಮತ್ತು ದೂರುದಾರರಿಗೆ ಮರಳಿ ಹಸ್ತಾಂತರಿಸುವ ಕಾರ್ಯದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ.
ತಮ್ಮ ತಾಂತ್ರಿಕ ನೈಪುಣ್ಯತೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಗಾಗಿ ಬೂದಿಹಾಳರು 2018ನೇ ಸಾಲಿನ ಮುಖ್ಯಮಂತ್ರಿಗಳ ಬಂಗಾರದ ಪದಕವನ್ನು ಪಡೆದಿದ್ದಾರೆ. ಈ ಎಲ್ಲಾ ಸಾಧನೆಗಳಿಗಾಗಿ 2025ರಲ್ಲಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕವನ್ನು ಪಡೆದಿರುವ ಅವರಿಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಗದಗ ಉಪ ವಿಭಾಗದ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಇಎನ್ ಠಾಣೆಯ ಡಿವೈಎಸ್ಪಿ ಮಹಾಂತೇಶ್ ಸಜ್ಜನ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.



