ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಪತ್ರಿಕಾಗೋಷ್ಠಿ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಡಿ.31ರ ಬೆಳಿಗ್ಗೆ 6 ಗಂಟೆಯಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಿದ್ಧತೆ ನಡೆದಿದೆ ಎಂದು ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಯು.ಎಸ್. ಸೊಪ್ಪಿಮಠ ವಕೀಲರು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಸ್ಟಾಫ್ & ವರ್ಕರ್ಸ್ ಫೆಡರೇಶನ್ (ಎಐಟಿಯುಸಿ ಸಂಯೋಜಿತ), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿಐಟಿಯು ಸಂಯೋಜಿತ) ಕರಾರಸಾ ಸಂಸ್ಥೆ ಪ.ಜಾ ಮತ್ತು ಪ.ಪಂ ನೌಕರರ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ, ಪ.ಪಂ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ, ನಾಲ್ಕೂ ಸಾರಿಗೆ ನಿಗಮಗಳ ಒಳಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು 25.01.2024ರಂದು ಸಾರಿಗೆ ನಿಗಮಗಳು ಸಮಸ್ತ ನೌಕರರ ಪರವಾಗಿ ಬೇಡಿಕೆಗಳ ಪಟ್ಟಿಯನ್ನು ಸಾರಿಗೆ ನಿಗಮಗಳ ಆಡಳಿತ ವರ್ಗ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.

Advertisement

ಈವರೆಗೂ ಸರ್ಕಾರದಿಂದಾಗಲಿ ಅಥವಾ ಸಾರಿಗೆ ನಿಗಮಗಳ ಆಡಳಿತ ವರ್ಗದಿಂದಾಗಲಿ ಯಾವುದೇ ಸ್ಪಂದನೆ ಇಲ್ಲದಿರುವುದು ಕಾರ್ಮಿಕರಿಗೆ ಅತೀವ ನಿರಾಶೆ ತಂದಿದೆ. ರಾಜ್ಯದಲ್ಲಿ ಪ್ರತಿದಿನ ಸುಮಾರು ಒಂದು ಕೋಟಿಗೂ ಹೆಚ್ಚಿನ ಜನರನ್ನು ತಲುಪಿಸುವುದು ಹಾಗೂ ಶಕ್ತಿ ಯೋಜನೆಯ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟಿರುವ ನಾಲ್ಕೂ ಸಾರಿಗೆ ನಿಗಮಗಳ ಒಂದು ಲಕ್ಷಕ್ಕೂ ಅಧಿಕ ನೌಕರರ ಬೇಡಿಕೆಗಳ ಬಗ್ಗೆ ತಮ್ಮ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಬೇಸರದ ಸಂಗತಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಂಚಾಲಕರುಗಳಾದ ಎ.ಬಿ. ದಿಂಡೂರ, ಹನುಮಂತಪ್ಪ ಅಂಬಿಗೇರ್, ಎಸ್.ಎ. ಗಫಾರ್, ಮಖಬೂಲ್ ರಾಯಚೂರು ಮುಂತಾದವರು ಉಪಸ್ಥಿತರಿದ್ದರು.

ಸಾರಿಗೆ ನೌಕರರ ಬೇಡಿಕೆಗಳಾದ 31.12.2023ರ ಮೂಲವೇತನದ ಶೇ. 25ರಷ್ಟು ಹೆಚ್ಚಳ ಮಾಡಿ ವೇತನ ಶ್ರೇಣಿಗಳನ್ನು ಸಿದ್ಧಪಡಿಸುವುದು, ಇಂಕ್ರಿಮೆಂಟ್ ದರ ಎಲ್ಲಾ ಹಂತಗಳಲ್ಲೂ ಮೂಲವೇತನದ ಶೇ. 4ರಷ್ಟು ಇರಬೇಕು ಇತ್ಯಾದಿ ಆಡಳಿತ ವರ್ಗಕ್ಕೆ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿ ಜೊತೆ ಚರ್ಚಿಸಿ ಪರಿಹರಿಸಬೇಕು. ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಡಿ.31ರಂದು ಬೆಳಿಗ್ಗೆ 6ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.


Spread the love

LEAVE A REPLY

Please enter your comment!
Please enter your name here