ನವದೆಹಲಿ: ಭಾರತ-ಪಾಕಿಸ್ತಾನ ಕದನವಿರಾಮದ ಬಳಿಕ ಇಂದು ಬೆಳಗ್ಗೆ ಪಂಜಾಬ್‌ನ ಅದಂಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಾಯುಪಡೆಯ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಹೌದು ಭಾರತದ ‘ಆಪರೇಷನ್ ಸಿಂಧೂರ’ ನಂತರ, ಮೇ 9 ಮತ್ತು 10 ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಂಪುರವೂ ಸೇರಿತ್ತು.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಂಜಾಬ್‌ನ ಅದಮ್‌ಪುರ ವಾಯುನೆಲೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದ್ದಾರೆ. ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ. ನಿಮ್ಮ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರು ಸೈನಿಕರ ಗುಣಗಾನ ಮಾಡಿದರು.
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಂದು ಪ್ರಾರಂಭಿಸಲಾದ ಯಶಸ್ವಿ ‘ಆಪರೇಷನ್ ಸಿಂಧೂರ’ ನಂತರ ದೇಶದ ಬಲಿಷ್ಠ ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಿದ ಒಂದು ದಿನದ ನಂತರ ಪ್ರಧಾನಿಯವರು ವಾಯುಪಡೆ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.