ಬಿಹಾರ: ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನಲ್ಲಿ ಮುಂದಿನ ದೊಡ್ಡ ಆಟಗಾರ ಎಂಬ ಖ್ಯಾತಿಯನ್ನು ಮೆರುಗುಗೊಳಿಸುತ್ತಲೇ ಇದ್ದಾರೆ. ಕಳೆದ ವರ್ಷ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆಯಾದಾಗಿನಿಂದ 14 ವರ್ಷದ ಈ ಆಟಗಾರ ದಾಖಲೆಯ ಸಾಧನೆ ಮಾಡುತ್ತಿದ್ದಾರೆ. ಐಪಿಎಲ್ ಹರಾಜಿನಲ್ಲಿ ಸಹಿ ಹಾಕಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯಿಂದ ಹಿಡಿದು ಟಿ20 ಇತಿಹಾಸದಲ್ಲಿ ಅತ್ಯಂತ ಕಿರಿಯ ಶತಕ ಬಾರಿಸುವವರೆಗೆ, ವೈಭವ್ ಸರಿಯಾದ ಪ್ರದರ್ಶನ ನೀಡುತ್ತಿದ್ದಾರೆ.
ಅದಲ್ಲದೆ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ವೈಭವ್ ಸೂರ್ಯವಂಶಿ ಶತಕ ಸಾಧನೆಯನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಬಿಹಾರದ ಪಾಟ್ನಾದಲ್ಲಿ ನಡೆದ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಸಮಾರಂಭದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಮೋದಿ, ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಡೀ ದೇಶದ ಗಮನ ಸೆಳೆದಿದ್ದಾರೆ.
ಐಪಿಎಲ್‌ನಲ್ಲಿ ಬಿಹಾರದ ಮಗ ವೈಭವ್ ಸೂರ್ಯವಂಶಿಯ ಪ್ರದರ್ಶನವನ್ನು ನಾವೆಲ್ಲರೂ ನೋಡಿದ್ದೇವೆ. ವೈಭವ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರ ಯಶಸ್ಸಿನ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಅವರು ವಿವಿಧ ಹಂತಗಳಲ್ಲಿ ಕ್ರಿಕೆಟ್ ಆಡಿದ್ದು ಸಹ ಅವರಿಗೆ ಸಹಾಯ ಮಾಡಿತು. ಇದರರ್ಥ ಒಬ್ಬರು ಹೆಚ್ಚು ಆಟವಾಡಿದಷ್ಟೂ ಅವರು ಹೆಚ್ಚು ಯಶಸ್ಸನ್ನು ಸಾಧಿಸುತ್ತಾರೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ವಾಸ್ತವವಾಗಿ ಏಪ್ರಿಲ್ 28 ರಂದು ರಾಜಸ್ಥಾನದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದರು. 7 ಬೌಂಡರಿ ಹಾಗೂ 11 ಸಿಕ್ಸರ್ ಸಹಿತ 100 ರನ್ ಪೂರೈಸಿದ ವೈಭವ್, ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದರು.
ಇದು ಮಾತ್ರವಲ್ಲದೆ ಐಪಿಎಲ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಗೂ ವೈಭವ್ ಕೊರಳೊಡ್ಡಿದ್ದರು. ಇಷ್ಟೇ ಅಲ್ಲ ಕೇವಲ 14 ವರ್ಷ 32 ದಿನಗಳ ವಯಸ್ಸಿನಲ್ಲಿ ಈ ಐತಿಹಾಸಿಕ ಇನ್ನಿಂಗ್ಸ್ ಆಡಿದ ವೈಭವ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಸ್ವರೂಪದಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.