ವಿಜಯಸಾಕ್ಷಿ ಸುದ್ದಿ, ಗದಗ: ಎರಡು ಕೆರೆಗಳ ಪುನರುಜ್ಜೀವನ ಯೋಜನೆಯ ಕುರಿತು ಮನ್ ಕಿ ಬಾತ್ 120ನೇ ಸರಣಿಯಲ್ಲಿ ಗದಗ ಜಿಲ್ಲೆಯನ್ನು ಉಲ್ಲೇಖಿಸಿದ್ದಕ್ಕಾಗಿ ಗದಗ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮನ್ ಕಿ ಬಾತ್ ಕಾರ್ಯಕ್ರಮದ ನಂತರ ಯೆಲಿಶಿರುಂದ, ಕಣವಿ, ಹೊಸೂರು ಗ್ರಾಮಸ್ಥರು ಸಿಹಿ ಮತ್ತು ಮಜ್ಜಿಗೆ ವಿತರಿಸಿದರು.
ಈ ಗ್ರಾಮಸ್ಥರು ಎಸ್‌ಬಿಐ ಫೌಂಡೇಶನ್ ಮತ್ತು ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸಹಾಯದಿಂದ ಎರಡು ದೊಡ್ಡ ಕೆರೆಗಳನ್ನು ಸ್ವಚ್ಛಗೊಳಿಸಿದ್ದಾರೆ ಮತ್ತು ಕೆರೆ ಅಭಿವೃದ್ಧಿಯಲ್ಲಿ ಗ್ರಾಮಸ್ಥರ, ಸಮುದಾಯದ ಸಹಭಾಗಿತ್ವವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದು, ಈ ಮೂರು ಗ್ರಾಮಗಳ ನಿವಾಸಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೋ ಕ್ಲಿಪ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಎಸ್‌ಬಿಐ ಫೌಂಡೇಶನ್ ಹಾಗೂ ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಕಳೆದ ಮೂರು ವರ್ಷಗಳಿಂದ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗದಗ ಜಿಲ್ಲೆಯ ಮುಂಡರಗಿ ಹಾಗೂ ಇತರೆ ತಾಲೂಕಿನ ರೈತರು ಹಾಗೂ ಗ್ರಾಮಸ್ಥರೊಂದಿಗೆ ಕೆಲಸ ಮಾಡುತ್ತಿದೆ. ಕಳೆದ ತಿಂಗಳು ಬೆಳಹೊಡ, ಮದಗನೂರಿನಲ್ಲಿಯೂ ತಂಡ ಕೆಲಸ ಮಾಡಿದೆ. ಈ ಗ್ರಾಮಗಳಲ್ಲಿ ಮಹಿಳೆಯರು ಸೇರಿದಂತೆ ಹಲವು ಗ್ರಾಮಸ್ಥರು ಕೆರೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾಲ್ಗೊಂಡಿದ್ದರು.
ತAಡವು ಮಾರ್ಚ್ 22ರಂದು ಹೊಸೂರಿನಲ್ಲಿ ರೈತರೊಂದಿಗೆ ವಿಶ್ವಜಲ ದಿನವನ್ನು ಆಚರಿಸಿತು ಮತ್ತು ಕೆರೆಯನ್ನು ಸ್ವಚ್ಛಗೊಳಿಸಿತು. ಗದಗ ಜಿಲ್ಲೆಯ ಹೊಸೂರು ಗ್ರಾಮದ ಹೊರವಲಯದಲ್ಲಿರುವ ಈ ಕೆರೆ ನೂರಾರು ಜಾನುವಾರುಗಳಿಗೆ ವರದಾನವಾಗಿದೆ. ಈ ಭಾಗದಲ್ಲಿ 5 ಕಿ.ಮೀ ಸುತ್ತ ಬೇರೆ ಯಾವುದೇ ನೀರಿನ ಮೂಲಗಳಿಲ್ಲದ ಕಾರಣ ಈಗ ಅನೇಕ ಕುರುಬರು ಹೊಸೂರು ಕೆರೆಯತ್ತ ಬರುತ್ತಿದ್ದಾರೆ.
ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸಂಸ್ಥಾಪಕ ಸಿಕಂದರ್ ಮೀರಾನಾಯಕ್ ಮಾತನಾಡಿ, ನಮ್ಮ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸಿರುವುದು ನಮಗೆ ನೈತಿಕ ಶಕ್ತಿ ತಂದುಕೊಟ್ಟಿದ್ದು, ಜನರು ಬಂದು ನಮ್ಮೊಂದಿಗೆ ಕೈಜೋಡಿಸಿದರೆ ಗದಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ನೂರಾರು ಕೆರೆಗಳ ಅಭಿವೃದ್ಧಿಗೆ ಸಿದ್ಧರಿದ್ದೇವೆ. ಯುಗಾದಿ ಮತ್ತು ರಂಜಾನ್ ಉಡುಗೊರೆಗಾಗಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದರು.
ಗ್ರಾ.ಪಂ ಸದಸ್ಯ ಶಿವಯ್ಯ ಯಳಿಸೂರು ಮಾತನಾಡಿ, ಪ್ರಧಾನಿ ಮೋದಿಯವರು ಯುಗಾದಿ, ರಂಜಾನ್ ಉಡುಗೊರೆ ನೀಡಿರುವುದು ನಮಗೆ ಸಂತಸ ತಂದಿದೆ. ಈ ಮೂರೂ ಗ್ರಾಮಸ್ಥರು ಖುಷಿಯಲ್ಲಿದ್ದು, ಮನ್ ಕಿ ಬಾತ್ ಇಲ್ಲಿನ ಹಲವಾರು ಗ್ರಾಮಸ್ಥರ ನೆಚ್ಚಿನ ಕಾರ್ಯಕ್ರಮವಾಗಿದ್ದು, ತಮ್ಮ ನೆಚ್ಚಿನ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಹೆಸರು ಕೇಳಿ ಸಂತಸವಾಗುತ್ತಿದೆ ಎಂದರು.