ಹೈದರಾಬಾದ್: ತೆಲಂಗಾಣ ಸರ್ಕಾರವು ಈ ವರ್ಷವೂ ಮಹಿಳೆಯರಿಗೆ ಉಚಿತ ಸೀರೆ ವಿತರಣಾ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.
ಈ ಬಾರಿ ಸೀರೆಗಳಿಗೆ ಹೊಸ ಬಣ್ಣ ಮತ್ತು ವಿನ್ಯಾಸವನ್ನು ಪರಿಚಯಿಸಲಾಗಿದ್ದು, ನೀಲಿ ಸೀರೆಗಳ ಬದಲು ಗಿಳಿ ಹಸಿರು ಬಣ್ಣಕ್ಕೆ ಕೆಂಪು ಜರಿ ಇರುವ ಸೀರೆಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಈ ಯೋಜನೆಗಾಗಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಸೀರೆಗಳ ಉತ್ಪಾದನೆಗೆ ಟೆಸ್ಕೊಗೆ ಆದೇಶ ನೀಡಲಾಗಿದೆ. ಕಳೆದ ವರ್ಷವೂ ಇದೇ ಯೋಜನೆಯಡಿ ಸುಮಾರು 86 ಲಕ್ಷ ಸೀರೆಗಳನ್ನು ವಿತರಿಸಲಾಗಿತ್ತು.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ನಿರ್ದೇಶನದಂತೆ ಪ್ರತಿ ವರ್ಷ ವಿಭಿನ್ನ ಬಣ್ಣ ಮತ್ತು ವಿನ್ಯಾಸದ ಸೀರೆಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ವರ್ಷದ ಸೀರೆ ವಿತರಣೆಯನ್ನು ಅಕ್ಟೋಬರ್ ವೇಳೆಗೆ ಉತ್ಪಾದನೆ ಪೂರ್ಣಗೊಳಿಸಿ, ನವೆಂಬರ್ 19ರಂದು ನಡೆಯುವ ಇಂದಿರಾ ಗಾಂಧಿ ಜಯಂತಿಯಂದು ವಿತರಿಸಲು ಸರ್ಕಾರ ಯೋಜಿಸಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರಿಗೆ ಏಕಕಾಲದಲ್ಲಿ ಸೀರೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.



