ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಶಿಕ್ಷಣ ಸಂಸ್ಥೆಯೊಳಗೆ ನಡೆದಿದ್ದ ಘಟನೆ ಇದೀಗ ರಾಜ್ಯಮಟ್ಟದಲ್ಲಿ ಆಕ್ರೋಶ ಹುಟ್ಟುಹಾಕಿದೆ. ಎನ್ಇಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ದಲಿತ ಅತಿಥಿ ಉಪನ್ಯಾಸಕಿ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಆರೋಪ ಮಾಡಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಥಾಪಿತವಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯಲ್ಲೇ ಈ ರೀತಿಯ ಗಂಭೀರ ಆರೋಪ ಕೇಳಿಬಂದಿರುವುದು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಶ್ನಾರ್ಥಕ ಗುರುತು ಮೂಡಿಸಿದೆ.
ಸಂತ್ರಸ್ತೆಯ ಪ್ರಕಾರ, ಕಾರಿನಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲೇ ಪ್ರಾಂಶುಪಾಲ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಜಾತಿಯನ್ನು ಉಲ್ಲೇಖಿಸಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದೇ ಸಂಸ್ಥೆಯ ಇಬ್ಬರು ಮಹಿಳಾ ಸಿಬ್ಬಂದಿಗಳ ಮೇಲೂ ಜಾತಿ ನಿಂದನೆಯ ಆರೋಪವನ್ನು ಅವರು ಮಾಡಿದ್ದಾರೆ.
ಘಟನೆ ಬಗ್ಗೆ ದೂರು ದಾಖಲಿಸಿ 21 ದಿನಗಳು ಕಳೆದರೂ ಆರೋಪಿ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ. ಪ್ರಾಂಶುಪಾಲನ ಬಂಧನವಾಗಿಲ್ಲ, ಆಡಳಿತ ಮಂಡಳಿ ಮೌನವಾಗಿದೆ. ಇನ್ನೊಂದು ಕಡೆ, ಸಂಸ್ಥೆಯೇ ಸಂತ್ರಸ್ತೆಯನ್ನು ಕೆಲಸದಿಂದ ವಜಾಗೊಳಿಸಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿಗೆ ಅವಳನ್ನು ತಳ್ಳಿದೆ.
ಆರೋಪಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.



