ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಖಾಸಗಿ ಹಾಗೂ ಸರಕಾರಿ ಬಸ್‌ಗಳ ಅನಾಹುತಗಳಿಂದ ಜನರು ತಮ್ಮ ಪ್ರಾಣಕಳೆದುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇತ್ತೀಚೆಗೆ ನಡೆದ ಹಲವು ಘಟನೆಗಳಲ್ಲಿ ಸಾರಿಗೆ ಸಂಸ್ಥೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಂತಹ ಅಪಘಾತಗಳಿಗೆ ಕಾರಣವಾಗಿದೆ ತಿಳಿಯಲು ಸೂಕ್ತ ತನಿಖೆ ನಡೆಸಬೇಕಿದೆ. ಇಂತಹ ದುರ್ಘಟನೆಗಳು ಮತ್ತೆ ಸಂವಹಿಸದಂತೆ ಎಚ್ಚರ ವಹಿಸಬೇಕಾಗಿದೆ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಎಲ್ಲ ಖಾಸಗಿ ಬಸ್ಸುಗಳ ತಪಾಸಣೆ ನಡೆಸಿ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಬೇಕು. ಜನರ ಸುರಕ್ಷತೆಯ ದೃಷ್ಟಿಯಿಂದ, ಖಾಸಗಿ ಬಸ್‌ಗಳ ನಿಯಂತ್ರಣವನ್ನು ಸರ್ಕಾರದ ಅಡಿಯಲ್ಲಿ ತರಬೇಕು. ಪರವಾನಗಿ ಮುಗಿದ, ಬಸ್ಸುಗಳು ಸಂಚರಿಸದಂತೆ ಕಠಿಣ ಕ್ರಮ ವಹಿಸಬೇಕು. ಸರಕಾರಿ ಹಾಗೂ ಖಾಸಕಿ ಹವಾನಿಯಂತ್ರಿತ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ವಿಶೇಷ ಕಾರ್ಯತಂತ್ರ ರೂಪಿಸಬೇಕು. ರಾತ್ರಿ ಸಂಚರಿಸುವ ಬಸ್‌ಗಳ ಚಾಲಕರು ಕುಡಿದು ವಾಹನ ಓಡಿಸುವುದನ್ನು ತಡೆಗಟ್ಟಲು ವಿಶೇಷ ತಪಾಸಣೆ ನಡೆಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.



