ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡಲು ಕೆಳ ಹಂತದಿಂದಲೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ರಾಜ್ಯ ಸರಕಾರ ಮುಂದಾಗಿದ್ದು, ಗ್ರಾಮಸ್ಥರು ಆಸಕ್ತಿ ವಹಿಸಿ ತಮ್ಮ ವಾರ್ಡ್ಗಳಲ್ಲಿ ಅಭಿವೃದ್ಧಿ ಮಾಡಬೇಕಾಗಿರುವ ಕೆಲಸಗಳನ್ನು ಚರ್ಚಿಸಬೇಕು ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ, ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ಇಲ್ಲಿಯ ಗ್ರಾಮ ಪಂಚಾಯಿತಿಯು ಲೆಕ್ಕದ ವೀರೇಶ್ವರ ದೇಗುಲದಲ್ಲಿ ಹಮ್ಮಿಕೊಂಡಿದ್ದ ವಾರ್ಡ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಸರಕಾರಿ ಅಧಿಕಾರಿಗಳಿಂದಲೇ ನಮ್ಮ ಗ್ರಾಮದ ಯೋಜನೆಗಳು ರೂಪಿತವಾಗುತ್ತಿದ್ದವು. ಇದರಿಂದ ಗ್ರಾಮದಲ್ಲಿ ಮೂಲಭೂತವಾಗಿ ಆಗಬೇಕಾಗಿರುವ ಕೆಲಸಗಳಿಗೆ ಆದ್ಯತೆ ಸಿಗುತ್ತಿರಲಿಲ್ಲ. ಪ್ರಮುಖವಾಗಿ ಎಷ್ಟೋ ಗ್ರಾಮಗಳಲ್ಲಿ ಈವರೆಗೂ ಸಹ ಸ್ಮಶಾನವೇ ಇಲ್ಲ. ಇಂತಹ ಸಮಸ್ಯೆಗಳಿಗೆ 2013ರಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಗ್ರಾಮಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿದ್ದ ಎಚ್.ಕೆ. ಪಾಟೀಲರು `ನಮ್ಮ ಗ್ರಾಮ ನಮ್ಮ ಯೋಜನೆ’ಯನ್ನು ಜಾರಿಗೆ ತಂದು ಕೆಳ ಹಂತದ ಜನರ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದಾರೆ.
ಈಗ ಮತ್ತೆ ಈ ಯೋಜನೆಯ ಮೂಲಕ ತಮ್ಮ ಗ್ರಾಮದ ಯೋಜನೆಯನ್ನು ತಾವೇ ತಯಾರಿಸಿ ಗ್ರಾ.ಪಂ ಮೂಲಕ ಸರಕಾರಕ್ಕೆ ಕಳುಹಿಸಿದರೆ ಹಂತ ಹಂತವಾಗಿ ಅನುಷ್ಠಾನ ಮಾಡಲು ಜನಪ್ರತಿನಿಧಿಗಳಿಗೆ ಅನುಕೂಲವಾಗುತ್ತದೆ. ಸ್ವಾಮಿ ವಿವೇಕಾನಂದರ ತತ್ವಗಳಡಿ ಇಡೀ ಗ್ರಾಮವೇ ಒಂದು ಕುಟುಂಬವಾಗಬೇಕು. ಈ ಕಾರ್ಯ ಚಟುವಟಿಕೆಗೆ ಯುವಕರು, ಯುವತಿಯರು ಮುಂದೆ ಬಂದು ಲಕ್ಕುಂಡಿ ದೇಶದಲ್ಲಿಯೇ ಮಾದರಿಯಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಮಾತನಾಡಿ, ಈಗಾಗಲೇ ಸಿ.ಎಂ ಸಿದ್ಧರಾಮಯ್ಯನವರ ಸರಕಾರ 5 ಗ್ಯಾರಂಟಿಗಳ ಮೂಲಕ ಮಹಿಳೆಯರಿಗೆ, ಯುವಕರಿಗೆ ಬಲ ತುಂಬಿದ್ದಾರೆ. ಪರಸ್ಪರ ಸಹಕಾರದಿಂದ ತಮ್ಮ ಗ್ರಾಮದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದರು.
ಗ್ರಾ.ಪಂ ಸದಸ್ಯ ಪೀರಸಾಬ ನದಾಫ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಗ್ರಾ.ಪಂ ಸದಸ್ಯರಾದ ಬಸವರಾಜ ಯಲಿಶಿರುಂದ, ಶ್ರೇಯಾ ಕಟಿಗ್ಗಾರ, ಅನ್ನಪೂರ್ಣ ರಿತ್ತಿ, ವಿರುಪಾಕ್ಷಪ್ಪ ಬೆಟಗೇರಿ, ರಮೇಶ ಭಾವಿ, ಹನುಮಂತಪ್ಪ ಬಂಗಾರಿ, ನೀಲವ್ವ ಬಂಡಿ, ದೇವಪ್ಪ ಖಂಡು, ಬಸವಣ್ಣಿಪ್ಪ ಮಾಡಲಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಉಪಸ್ಥಿತರಿದ್ದರು. ಪಿ.ಡಿ.ಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಬಿ. ಜಾನೋಪಂತರ ಸ್ವಾಗತಿಸಿದರು. ಎಂ.ಎ. ಗಾಜಿ ವಂದಿಸಿದರು.
ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಈಗಾಗಲೇ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಕುಡಿಯುವ ನೀರಿನ ಯಂತ್ರ, ಪರೀಕ್ಷೆಗೆ ಸಿದ್ಧವಾಗಲು ಮಿನಿ ಪತ್ರಿಕೆ, ನೋಟ್ ಬುಕ್ ಕೊಡುಗೆ ನೀಡಲಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ವಿವಿಧ ವಾರ್ಡ್ಗಳಲ್ಲಿ ಸಿ.ಸಿ. ರಸ್ತೆ, ಹೈ ಮಾಸ್ಟ್ ದೀಪ, ಗಟಾರು ನಿರ್ಮಾಣ, ಸಿಸ್ಟನ್ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.



