ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮತಕ್ಷೇತ್ರದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗವನ್ನು ಮುಖ್ಯವಾಹಿನಿಗೆ ತರಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶಿರಹಟ್ಟಿ ಪಟ್ಟಣದ ಛಬ್ಬಿ ರಸ್ತೆ ಪಕ್ಕದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರಿಗೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ತಾಡ್‌ಪಲ್ ವಿತರಿಸಿ ಮಾತನಾಡಿದರು.
ದಶಕಗಳ ಕಾಲದಿಂದಲೂ ಸಮರ್ಪಕ ಮೂಲಸೌಕರ್ಯ ಸಿಗದೇ ಅತ್ತಿಂದಿತ್ತ ಸಂಚರಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ನಿಗಮದಿಂದ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ತಲುಪಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ನಿಟ್ಟಿನಲ್ಲಿ ಈಗಾಗಲೇ ಅಲೆಮಾರಿ ಜನಾಂಗದವರು ನಿವೇಶನವನ್ನು ಕಲ್ಪಿಸುವುದಕ್ಕೆ ಮನವಿಯನ್ನು ಸಲ್ಲಿಸಿದ್ದು, ಆ ಪ್ರಯುಕ್ತ ನಾನು ಕೂಡಾ ಅಲೆಮಾರಿ ಜನಾಂಗದ ಅಭಿವೃದ್ಧಿ ನಿಗಮಕ್ಕೆ ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಒತ್ತಾಯ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಪ.ಪಂ ಸದಸ್ಯ ಸಂದೀಪ ಕಪ್ಪತ್ತನವರ, ಪರಶುರಾಮ ಡೊಂಕಬಳ್ಳಿ, ರಾಮಣ್ಣ ಕಂಬಳಿ, ಬಸವರಾಜ ಮಾದರ, ಸಮಾಜ ಕಲ್ಯಾಣ ಇಲಾಖೆಯ ಎಸ್.ವಿ. ಸಂಕನೂರ, ತಿಪ್ಪಣ್ಣ ಲಮಾಣಿ, ಮಲ್ಲಿಕಾರ್ಜುನ ಕಬಾಡಿ ಮುಂತಾದವರು ಉಪಸ್ಥಿತರಿದ್ದರು.



