ಗಾಂಧಿ ತತ್ವಗಳ ಪ್ರಚಾರಕ್ಕೆ ಆದ್ಯತೆ: ಸಚಿವ ಸಂತೋಷ ಲಾಡ್

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಹಾತ್ಮ ಗಾಂಧೀಜಿಯವರು ಬದುಕಿದ ರೀತಿ, ಹೋರಾಟದ ಗತಿ ಮತ್ತು ಅವರು ಬೋಧಿಸಿ, ಪಾಲಿಸಿದ ತತ್ವ, ಜೀವನ ಸಂದೇಶಗಳು ಇಂದಿನ ಸರಕಾರಗಳ ಮತ್ತು ಆಡಳಿತದ ಮೂಲ ತತ್ವಗಳಾಗಿವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಹೇಳಿದರು.

Advertisement

ಅವರು ಸೋಮವಾರ ಬೆಳಿಗ್ಗೆ ಧಾರವಾಡ ಕುಮಾರೇಶ್ವರ ನಗರದ ವ್ಯಾಪ್ತಿಯ ಧಾರವಾಡ ಹೊಸ ಕೇಂದ್ರ ಬಸ್ ನಿಲ್ದಾಣ ಹತ್ತಿರದಲ್ಲಿ ಧಾರವಾಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ಗಾಂಧಿ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ ಅವರ ತತ್ವ-ಸಿದ್ಧಾಂತ, ಜೀವನ ಸಂದೇಶಗಳನ್ನು ಜನಸಾಮಾನ್ಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮುದಾಯಕ್ಕೆ ನಿರಂತರವಾಗಿ ತಲುಪಿಸಲು ವಿವಿಧ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು.

ಗಾಂಧಿ ಭವನ ನಿರ್ಮಾಣಕ್ಕಾಗಿ ಪ್ರತಿ ಜಿಲ್ಲೆಗೆ ಉಚಿತವಾಗಿ ಅಗತ್ಯ ನಿವೇಶನ ನೀಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದರು. ವಾರ್ತಾ ಇಲಾಖೆಯಿಂದ ಗಾಂಧಿ ಭವನ ನಿರ್ಮಿಸಲು ರೂ. 3 ಕೋಟಿ ಅನುದಾನ ಸಹ ಬಿಡುಗಡೆ ಮಾಡಲಾಗಿತ್ತು. ಅದರಂತೆ ಧಾರವಾಡ ಗಾಂಧಿ ಭವನ ಅತೀ ಸುಂದರವಾಗಿ ರೂಪುಗೊಂಡಿದೆ ಎಂದು ಸಚಿವರು ತಿಳಿಸಿದರು.

ಗಾಂಧಿ ಭವನವನ್ನು ಗಾಂಧಿ ತತ್ವಗಳ ಪ್ರಚಾರ ಕೇಂದ್ರವಾಗಿ ರೂಪಿಸಲು ಕ್ರಮವಹಿಸಲಾಗುವುದು. ಇದೊಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಸ್ಥಳವಾಗಿ, ವಿಚಾರ ಸಂಕಿರಣ, ಗಾಂಧಿ ಕಾರ್ಯಕ್ರಮಗಳಿಗೆ ನೀಡುವ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಕ್ರಮವಹಿಸಲಿದೆ. ಭವನದ ನಿರ್ವಹಣೆ ಹೊಣೆಯನ್ನು ಮಹಾನಗರಪಾಲಿಕೆ ಅಥವಾ ಇತರ ಏಜನ್ಸಿಗಳಿಗೆ ವಹಿಸುವ ಕುರಿತು ಸಮಿತಿ ಚರ್ಚಿಸಲಿದೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಕೆ.ಆರ್.ಡಿ.ಐ.ಎಲ್. ಕಾರ್ಯಪಾಲಕ ಅಭಿಯಂತರರಾದ ಸುಜಾತಾ ಕಾಳೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಡಾ. ಶಶಿಧರ ಚನ್ನಪ್ಪಗೌಡರ, ಧಾರವಾಡ ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ಗಾಂಧಿ ಅನುಯಾಯಿಗಳಾದ ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶ್ರೀಶೈಲ ಕಮತರ ಸೇರಿದಂತೆ ಸಾರ್ವಜನಿಕರು, ಗಾಂಧಿ ಅಭಿಮಾನಿಗಳು ಭಾಗವಹಿಸಿದ್ದರು.

ವಾರ್ತಾ ಇಲಾಖೆಯ ಬೆಳಗಾವಿ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ವಾರ್ತಾ ಸಹಾಯಕ ಅಧಿಕಾರಿ ಡಾ. ಸುರೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಗಾಂಧಿ ಭವನದ ನಿರ್ಮಾಣದ ಬಗ್ಗೆ, ಛಾಯಾಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಗಾಂಧಿ ಭವನದ ನಿರ್ಮಾಣದ ಹಿನ್ನೆಲೆ ಹಾಗೂ ಗಾಂಧಿ ಭವನದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿ, ಗಾಂಧಿ ಭವನದ ವಿವಿಧ ಹಾಲ್, ಸೌಲಭ್ಯಗಳ ಕುರಿತು ವಿವರಿಸಿದರು.


Spread the love

LEAVE A REPLY

Please enter your comment!
Please enter your name here