ಕಾರವಾರ: ಕಾರವಾರ ಜೈಲಿನಲ್ಲಿ ಮತ್ತೊಮ್ಮೆ ಕೈದಿಗಳು ದಾಂಧಲೆ ಸೃಷ್ಟಿಸಿರುವ ಘಟನೆ ಆತಂಕ ಮೂಡಿಸಿದೆ.
ಮಂಗಳೂರು ಮೂಲದ ಆರು ಆರೋಪಿಗಳು ಜೈಲಿನೊಳಗೆ ಗಲಾಟೆ ನಡೆಸಿ, ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿರುವುದು ಬೆಳಕಿಗೆ ಬಂದಿದೆ. ಘಟನೆ ಬಳಿಕ ಕಾರವಾರ ನಗರ ಠಾಣೆ ಪೊಲೀಸರ ತಂಡ ತಕ್ಷಣ ಜೈಲಿಗೆ ದೌಡಾಯಿಸಿ ಪರಿಸ್ಥಿತಿ ಪರಿಶೀಲಿಸಿದೆ.
ಇದೇ ಕೆಲ ದಿನಗಳ ಹಿಂದೆ ಜೈಲಿನಲ್ಲಿ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲು ಬಿಗಿ ಬಂದೋಬಸ್ತ್ ಮಾಡಲಾಗಿದ್ದ ವೇಳೆ, ಆರೋಪಿಗಳು ಜೈಲರ್ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಈ ಹಲ್ಲೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ತಿಳಿದುಬಂದಿದೆ.
ಡಕಾಯಿತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಈ ಗುಂಪು, ಮಂಗಳೂರು ಜೈಲಿನಲ್ಲಿ ಹೆಚ್ಚುವರಿ ಸಮಸ್ಯೆ ಸೃಷ್ಟಿಸುತ್ತಿದ್ದ ಕಾರಣ ಅವರನ್ನು ಕಾರವಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಮೊನ್ನೆಯ ಹಲ್ಲೆ ಘಟನೆಯ ಸದ್ದು ಮಂಕಾಗುವ ಮುನ್ನವೇ ಇಂದು ಉಳಿದ ಸಹಚರ ಕೈದಿಗಳು ಮತ್ತೊಮ್ಮೆ ದಾಂಧಲೆ ನಡೆಸಿದ್ದು, ಜೈಲಿನ ಒಳಭಾಗದಲ್ಲಿ ಹಾನಿ ಉಂಟುಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಕಾರವಾರ ಡಿವೈಎಸ್‌ಪಿ ಗಿರೀಶ್ ಜೈಲಿನಲ್ಲೇ ಮೊಕ್ಕಾಂ ಹೂಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.



