ಹಳ್ಳಕ್ಕೆ ಉರುಳಿದ ಖಾಸಗಿ ಬಸ್; ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಗಾಯ!

0
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಸೇತುವೆ ಮೇಲಿಂದ ಹಳ್ಳಕ್ಕೆ ಪಲ್ಟಿಯಾಗಿ 24ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಅಣಜಿಗೆರೆ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ದಾವಣಗೆರೆಯಿಂದ ಉಚ್ಚಂಗಿದರ್ಗ, ಮಾದಿಹಳ್ಳಿ ಮಾರ್ಗವಾಗಿ 28 ಜನ ಪ್ರಯಾಣಿಕರನ್ನು ತುಂಬಿಕೊಂಡು ಹರಪನಹಳ್ಳಿ ಕಡೆ ಹೊರಟ್ಟಿದ್ದ ಬನಶಂಕರಿ ಖಾಸಗಿ ಬಸ್ ಅಣಜಿಗೆರೆ ಬಳಿಯಿರುವ ಸೇತುವೆಯ ಬಳಿ ಪಲ್ಟಿಯಾಗಿದೆ. ಗಾಯಾಳುಗಳನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ 4 ಜನ ಪ್ರಯಾಣಿಕರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಣಜಿಗೆರೆ ಬಳಿಯಿರುವ ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಈ ಘಟನೆ ಸಂಭವಿಸಿದೆ. ಮಳೆಗಾಲದಲ್ಲಿ ಹಳ್ಳಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಸೇತುವೆ ಕೆಳಗಡೆ ಸಣ್ಣ ಪ್ರಮಾಣದ ಪೈಪ್ ಅಳವಡಿಸಿದ್ದರಿಂದ ಸೇತುವೆ ಮೇಲೆ ನೀರು ಹರಿದು ಪಾಚಿಗಟ್ಟಿದೆ. ಇದರಿಂದ ಇಂತಹ ಅನಾಹುತಗಳು ನಡೆಯುತ್ತವೆ ಎಂದು ಅಣಜಿಗೆರೆಯ ತರಿಹಳ್ಳಿ ಮಂಜುನಾಥ ಹೇಳಿದರು.

ಸ್ಥಳಕ್ಕೆ ಅರಸೀಕರೆ ಪೊಲೀಸ್ ಠಾಣೆಯ ಪಿಎಸ್‌ಐ ವಿಜಯಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here