ಕೊಪ್ಪಳ: ಹುಲಿಗೆಮ್ಮ ದೇವಾಲಯದ ಪಾದಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಖಾಸಗಿ ಸ್ಲೀಪರ್ ಬಸ್ ಹರಿದ ಪರಿಣಾಮ ಮೂವರು ಸಾವನ್ನಪ್ಪಿದ ದಾರುಣ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ನಡೆದಿದೆ.
ಭೀಕರ ಅಪಘಾತದಲ್ಲಿ ಅನ್ನಪೂರ್ಣ (40), ಪ್ರಕಾಶ್ (25) ಮತ್ತು ಶರಣಪ್ಪ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರು ಎಂದು ತಿಳಿದುಬಂದಿದೆ. ಇನ್ನೂ ಘಟನೆಯಲ್ಲಿ ನಾಲ್ವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ.
ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಾದಯಾತ್ರಿಕರ ಮೇಲೆ ಹರಿದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಭಕ್ತರು ಹುಲಿಗೆಮ್ಮ ದೇವಾಲಯದಿಂದ ಕೇವಲ ಮೂರು ಗಂಟೆಗಳ ನಡಿಗೆಯ ದೂರದಲ್ಲಿದ್ದರು ಎಂಬುದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.