ಬೆಂಗಳೂರು:- 2 ದಿನ ಶಾಲೆಗೆ ಬರದಿದ್ದಕ್ಕೆ ಶಿಕ್ಷಕರು ವಿದ್ಯಾರ್ಥಿಗೆ ಕ್ರೂರ ಶಿಕ್ಷೆ ನೀಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಶಾಲೆಯಲ್ಲಿ ನಡೆದಿದೆ.
ಐದನೇ ತರಗತಿ ವಿದ್ಯಾರ್ಥಿಯನ್ನು ಕತ್ತಲು ಕೋಣೆಯಲ್ಲಿ ಕೂಡಿಹಾಕಿ ಪಿವಿಸಿ ಪೈಪ್‌ನಿಂದ ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಈ ಹಲ್ಲೆಯಿಂದ ಬಾಲಕ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ, ಮನೆಯಲ್ಲಿ ಕಿರುಚಾಡುತ್ತ ಓಡಾಡುತ್ತಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.
ವಿದ್ಯಾರ್ಥಿಯು ಎರಡು ದಿನ ಕ್ಲಾಸ್ ಬಿಟ್ಟಿದ್ದರಿಂದ ಪ್ರಾಂಶುಪಾಲರು ಹಾಗೂ ಕೆಲ ಶಿಕ್ಷಕರು ಸೇರಿ ಹಲ್ಲೆ ನಡೆಸಿದ್ದಾರೆಂದು ಆರೋಪ. ಮಗುವಿನ ದೇಹದ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋಷಕರ ಆಕ್ರೋಶ – “ಶಾಲೆಯವರು ನಮ್ಮ ಮಗುವಿಗೆ ಕ್ರೂರ ಶಿಕ್ಷೆ ನೀಡಿದ್ದು ಮಾತ್ರವಲ್ಲ, ಬದಲಾಗಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಈ ಘಟನೆಯ ಕುರಿತು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.