ಲಕ್ಷ್ಮೇಶ್ವರ: ಗದಗ ರಸ್ತೆಯ ಗೊಜನೂರ ಗ್ರಾಮದ ಹತ್ತಿರ ಖಾಸಗಿ ಬಸ್ಸೊಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ಜರುಗಿದೆ. ಘಟನೆಯಲ್ಲಿ 9 ಜನ ಗಾಯಗೊಂಡಿದ್ದು, ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಲಕ್ಷ್ಮೇಶ್ವರ ಹಾಗೂ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೀಡಾದವರೆಲ್ಲರೂ ಗೊಜನೂರ ಗ್ರಾಮದವರಾಗಿದ್ದು, ಟ್ರ್ಯಾಕ್ಟರ್‌ನಲ್ಲಿ ಲಕ್ಷ್ಮೇಶ್ವರದಿಂದ ಗೊಜನೂರಿಗೆ ಹೊರಟಿದ್ದರು ಎನ್ನಲಾಗಿದೆ.
ಲಕ್ಷ್ಮೇಶ್ವರದತ್ತ ಬರುತ್ತಿದ್ದ ಖಾಸಗಿ ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ ನಲ್ಲಿದ್ದವರು ತೀವ್ರ ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಲಕ್ಷ್ಮೇಶ್ಬರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಕೆಲ ಗಾಯಾಳುಗಳನ್ನು ಜಿಮ್ಸ್‌ಗೆ ರವಾನಿಸಲಾಗಿದೆ.
ಮಲ್ಲಿಕಾರ್ಜುನ ಬಿಜ್ಜೂರ ಎಂಬುವವರ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪ್ರಕಾಶ ತಾರಿಕೊಪ್ಪ, ದೇವಕ್ಕ ತಾರಿಕೊಪ್ಪ, ಸಿದ್ದಾರ್ಥ ತಾರಿಕೊಪ್ಪ, ಯಲ್ಲಪ್ಪ ಯಳವತ್ತಿ, ನೀಲವ್ವ ಮಜ್ಜೂರ, ಹೊನ್ನಪ್ಪ ಬಿಚಗತ್ತಿ, ಗೀತಾ ಪಾಟೀಲ, ಕರಿಯಪ್ಪ ಯಳವತ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.