HomeKarnataka Newsನಾವಿರುವವರೆಗೂ ಎಸ್ಕಾಂಗಳ ಖಾಸಗೀಕರಣಕ್ಕೆ ಅವಕಾಶವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ನಾವಿರುವವರೆಗೂ ಎಸ್ಕಾಂಗಳ ಖಾಸಗೀಕರಣಕ್ಕೆ ಅವಕಾಶವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು:“ನಾನು, ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರುವವರೆಗೂ ರಾಜ್ಯದಲ್ಲಿರುವ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಅವಕಾಶ ನೀಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಕರ್ನಾಟಕ ಪ್ರಸರಣ ನಿಗಮ ನೌಕರರ ಸಂಘದ 60ನೇ ವಜ್ರ ಮಹೋತ್ಸವ ಸಂಭ್ರಮ ಹಾಗೂ ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ನಾನು ಇಂಧನ ಸಚಿವನಾದ ಬಳಿಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಎಸ್ಕಾಂಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಹೀಗಾಗಿ ಬೆಂಗಳೂರಿನಲ್ಲೂ ಖಾಸಗಿಯವರಿಗೆ ನೀಡಬೇಕು ಎಂದು ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಆಗ ನಾನು ಅವರಿಗೆ ನಮ್ಮ ನೌಕಕರು, ಇಂಜಿನಿಯರ್ ಗಳು,

ವ್ಯವಸ್ಥಾಪಕ ಮಂಡಳಿಯವರು ಬಹಳ ಶಕ್ತಿಶಾಲಿಯಾಗಿದ್ದು ಎಸ್ಕಾಂಗಳನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದೆ. ರಾಜ್ಯದಲ್ಲಿ ಈ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರು ಇರುವವರೆಗೂ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದರು.

“ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ, 19-20% ಟ್ರಾನ್ಸ್ ಮಿಷನ್ ನಷ್ಟ ಆಗುತ್ತಿತ್ತು. ನಾವು ಅದನ್ನು 10%ಗೆ ಇಳಿಸಿದ್ದೇವೆ. ಇದು ದೇಶಕ್ಕೆ ಮಾದರಿ. ಬೇರೆ ರಾಜ್ಯಗಳಲ್ಲಿ ಇಂದಿಗೂ 17-18% ನಷ್ಟವಾಗುತ್ತಿದೆ. ನಿಮ್ಮೆಲ್ಲರ ಶ್ರಮದಿಂದ ಇಂದು ಈ ಇಂಧನ ಇಲಾಖೆ ಶಕ್ತಿಶಾಲಿಯಾಗಿ ಬೇಳೆಯುತ್ತಿದೆ. ಜಾರ್ಜ್ ಅವರು ಈ ಇಲಾಖೆಯ ಜವಾಬ್ದಾರಿ ತೆಗೆದುಕೊಂಡು ಪಾರದರ್ಶಕವಾಗಿ ಬಹಳ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ನಾವು ಈ ಹಿಂದೆ ಅನೇಕ ಕ್ರಾಂತಿಕಾರಕ ತೀರ್ಮಾನ ಮಾಡಿದ್ದೆವು” ಎಂದು ತಿಳಿಸಿದರು.

“ದೀಪ ಜಗತ್ತನ್ನೇ ಬೆಳಗುತ್ತದೆ. ಈ ದೀಪಕ್ಕೆ ಬೆಳಕು ಪೂರೈಸುತ್ತಿರುವವರು ನೀವು. ದೀಪದ ಬೆಳಕು ಎಲ್ಲರಿಗೂ ಕಾಣುತ್ತದೆ. ಆದರೆ ಅದರ ಹಿಂದೆ ಇರುವ ಎಣ್ಣೆ ಹಾಗೂ ಬತ್ತಿ ಯಾರಿಗೂ ಕಾಣುವುದಿಲ್ಲ. ಅದೇ ರೀತಿ ಇಂಧನ ಇಲಾಖೆ ನೌಕರರ ಶ್ರಮದಿಂದ ಇಡೀ ಸಮಾಜಕ್ಕೆ ಬೆಳಕು ನೀಡಲಾಗುತ್ತಿದೆ. ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಬಂದಾಗಿನಿಂದ ನೀವು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದೀರಿ” ಎಂದು ತಿಳಿಸಿದರು.

“ಪ್ರೀತಿ ವಿಶ್ವಾಸ ಎಂಬುದು ಮರದಲ್ಲೂ ಸಿಗುವುದಿಲ್ಲ, ಮಾರುಕಟ್ಟೆಯಲ್ಲೂ ಸಿಗುವುದಿಲ್ಲ. ಕೇವಲ ಜನರ ಹೃದಯದಲ್ಲಿ ಮಾತ್ರ ಸಿಗುತ್ತದೆ. ನಾವು ನಿಮಗಾಗಿ ಮಾಡಿದ ಸೇವೆ, ತೀರ್ಮಾನವನ್ನು ನೀವು ಸ್ಮರಿಸಿ, ನಮ್ಮ ಮೇಲೆ ವಿಶ್ವಾಸವಿಟ್ಟಿರುವುದಕ್ಕೆ ಸರ್ಕಾರದ ಪರವಾಗಿ ನಮಿಸುತ್ತೇನೆ. ಸಿದ್ದರಾಮಯ್ಯ ಅವರ ಈ ಹಿಂದಿನ ಸರ್ಕಾರದಲ್ಲಿ ನಾನು ನಾಲ್ಕೂವರೆ ವರ್ಷ ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೆ.

ನಾನು ಈ ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ, ಇದರ ಜವಾಬ್ದಾರಿ ಹೊತ್ತವರೆಲ್ಲರೂ ವಿಫಲರಾಗಿದ್ದಾರೆ, ನೀವು ಯಾಕೆ ಇದರ ಜವಾಬ್ದಾರಿ ವಹಿಸಿಕೊಂಡಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ ಎಂದು ಹೇಳಿದೆ. ಕಷ್ಟದ ಜವಾಬ್ದಾರಿ ವಹಿಸಿಕೊಂಡು ಅದನ್ನು ಸರಿಪಡಿಸುವುದೇ ನಾಯಕನ ಗುಣ” ಎಂದು ತಿಳಿಸಿದರು.

ಪಾರದರ್ಶಕವಾಗಿ 24 ಸಾವಿರ ಸಿಬ್ಬಂದಿ ನೇಮಕ

“ನಾನು ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ ರಾಜ್ಯದಲ್ಲಿ 11 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಇಲಾಖೆ ಜವಾಬ್ದಾರಿ ಬಿಡುವಾಗ ರಾಜ್ಯದಲ್ಲಿ 23 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಇಲಾಖೆಯಲ್ಲಿ ಒಂದು ರೂಪಾಯಿ ಲಂಚ ಪಡೆಯದೇ, ಪಾರದರ್ಶಕವಾಗಿ 24 ಸಾವಿರ ನೌಕರರನ್ನು ನೇಮಕಾತಿ ಮಾಡಿದೆ. ಈ ಹಿಂದೆ ಇದ್ದ ವಿದ್ಯುತ್ ಶಕ್ತಿ ಮಂತ್ರಿಗಳು ನೇಮಕಾತಿಗೆ ವಸೂಲಿ ಮಾಡುತ್ತಿದ್ದರು. ನಾನು ಅದನ್ನು ತಪ್ಪಿಸಿ, ನಿಮ್ಮ ಮನೆ ಬಾಗಿಲಿಗೆ ನೌಕರಿಯನ್ನು ಕೊಟ್ಟ ತೃಪ್ತಿ ನನಗಿದೆ” ಎಂದರು.

“ಇಲಾಖೆ ನೌಕಕರು ಇಂದಿರಾ ಗಾಂಧಿ ಅವರನ್ನು ಸ್ಮರಿಸಬೇಕು. ನಿಮ್ಮ ಇಲಾಖೆಗೆ ಹೊಸ ರೂಪ ಕೊಟ್ಟಾಗ ನೌಕರರ ಸಂಘದ ಪದಾಧಿಕಾರಿಗಳು, ಇಂಜಿನಿಯರ್ ಪದಾಧಿಕಾರಿಗಳು ವ್ಯವಸ್ಥಾಪಕ ಮಂಡಳಿಯಲ್ಲಿ ಇರಬೇಕು ಎಂದು ಆದೇಶ ಕೊಟ್ಟಿದ್ದರು. ಇಂದು ಬಲರಾಮ್, ಶಿವಣ್ಣ ಅವರು ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಜತೆ ಕೂತು ನಿಮ್ಮ ಭವಿಷ್ಯದ ಬಗ್ಗೆ ತೀರ್ಮಾನ ಮಾಡುವಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಿದರು.

ಇಂತಹ ತೀರ್ಮಾನ ಮಾಡಿದವರನ್ನು ನೀವು ಸ್ಮರಿಸಿಕೊಳ್ಳಬೇಕು. ನಾನು ಸಚಿವನಾಗಿ ಬಂದಾಗ 7 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿತ್ತು. ಅದನ್ನು ಐದು ವರ್ಷಕ್ಕೆ ಇಳಿಸಿ ಒಂದೇ ಬಾರಿಗೆ 26% ನಷ್ಟು ವೇತನ ಏರಿಕೆ ಮಾಡಲಾಯಿತು. ಇದನ್ನು ಮಾಡಿದ್ದು ಕಾಂಗ್ರೆಸ್ ಸರ್ಕಾರ” ಎಂದು ತಿಳಿಸಿದರು.

ರೈತರಿಂದ ಭೂಮಿ ಖರೀದಿಸದೇ ಸೋಲಾರ್ ಪಾರ್ಕ್ ನಿರ್ಮಾಣ

“ಪವನ ಶಕ್ತಿ, ಸೌರಶಕ್ತಿ, ಬೆಂಗಳೂರು ನಗರದಲ್ಲಿ ಅನಿಲ ಉತ್ಪಾದನೆ ವಿಚಾರವಾಗಿ ನಾವು ಅನೇಕ ತೀರ್ಮಾನ ಮಾಡಿದ್ದೆವು. ಅದರ ಪರಿಣಾಮವಾಗಿ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಬಂಡವಾಳ ಹೂಡಿಕೆದಾರರು ಆಸಕ್ತಿ ತೋರಿದರು. ಪಂಪ್ ಸ್ಟೋರೇಜ್ ಪವರ್ ಅನ್ನು ಹೊಸದಾಗಿ ಆರಂಭಿಸುತ್ತಿದ್ದು, ಸವದತ್ತಿ ಹಾಗೂ ವರಾಹಿಯಲ್ಲಿ ನಿರ್ಮಿಸಲು ಮುಂದಾಗಿದ್ದೇವೆ. ರೈತರಿಗೆ ಹಗಲಿನಲ್ಲಿ ವಿದ್ಯುತ್ ನೀಡಲು ಪ್ರತಿ ತಾಲೂಕಿನಲ್ಲಿ 20-50 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲು ತೀರ್ಮಾನ ಮಾಡಿದ್ದೇವೆ.

ಇನ್ನು ಪಾವಗಡ ಸೌರಶಕ್ತಿ ಉತ್ಪಾದನಾ ಕೇಂದ್ರ ಸ್ಥಾಪಿಸುವಾಗ ಅಲ್ಲಿನ ಕೃಷಿ ಭೂಮಿ ಬೆಲೆ ಕೇವಲ 50 ಸಾವಿರ ಇತ್ತು. ಆದರೂ ರೈತರಿಂದ ಭೂಮಿ ಖರೀದಿ ಮಾಡದೇ ಪ್ರತಿ ವರ್ಷ ಅವರಿಗೆ ಪ್ರತಿ ಎಕರೆಗೆ 18 ಸಾವಿರ ಬಾಡಿಗೆ ನೀಡಿ ಈ ಯೋಜನೆಯನ್ನು ಜಾರಿ ಮಾಡಿದ್ದೇವೆ. ಈಗ ಅವರಿಗೆ ವರ್ಷಕ್ಕೆ 26-27 ಸಾವಿರ ಬಾಡಿಗೆ ಬರುತ್ತಿದೆ. ಈಗಲೂ ಅಲ್ಲಿನ ರೈತರು ಈ ಜಾಗದ ಮಾಲೀಕರೇ ಆಗಿದ್ದಾರೆ” ಎಂದು ತಿಳಿಸಿದರು.

“ನಮ್ಮ ಈ ಯೋಜನೆ ವಿಶ್ವಕ್ಕೆ ಮಾದರಿಯಾಗಿತ್ತು. ಕೇಂದ್ರ ಸರ್ಕಾರ ಕರ್ನಾಟಕ ಮಾದರಿಯನ್ನು ಅನುಸರಿಸುತ್ತಿದೆ. ಮನುಷ್ಯನ ಹುಟ್ಟು ಆಕಸ್ಮಿತ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಾನು ಈ ಇಲಾಖೆ ಮಂತ್ರಿಯಾಗಿ ಜವಾಬ್ದಾರಿ ವಹಿಸಿದ ನಂತರ ನನ್ನ ಬದುಕಿನಲ್ಲಿ ದೊಡ್ಡ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗಿದ್ದೇನೆ ಎಂಬ ಆತ್ಮತೃಪ್ತಿಯಿದೆ. ನಿಮ್ಮೆಲ್ಲರ ಪ್ರಯತ್ನ, ಸಹಕಾರ, ಪರಿಶ್ರಮದಿಂದ ಇದು ಸಾಧ್ಯವಾಗಿದೆ” ಎಂದರು.

ನೀವು ಮನಸ್ಸು ಮಾಡಿದರೆ ಮೇಲಕ್ಕೂ ಏರಿಸಬಹುದು, ಕೆಳಕ್ಕೂ ಬೀಳಿಸಬಹುದು

“ನಮ್ಮ ರಾಜ್ಯದಲ್ಲಿ 35 ಲಕ್ಷ ಐಪಿ ಸೆಟ್, 2 ಲಕ್ಷ ಗ್ರಾಹಕರಿದ್ದಾರೆ. ಅವರ ಬದುಕು ನಿಮ್ಮ ವಿಶ್ವಾಸವಿದೆ. ಈ ಎಲ್ಲಾ ಗ್ರಾಹಕರ ಸಂಪರ್ಕ ನಿಮ್ಮ ಜತೆಗೆ ಇದೆ. ನೀವು ಮನಸ್ಸು ಮಾಡಿದರೆ, ಡಿ.ಕೆ. ಶಿವಕುಮಾರ್ ಅವರನ್ನು ಮೇಲಕ್ಕೆ ಏರಿಸಬಹುದು, ಕೆಳಕ್ಕೆ ಇಳಿಸಲೂಬಹುದು. ಈ ವಿಚಾರದಲ್ಲಿ ನನಗೆ ನಿಮ್ಮ ಮೇಲೆ ವಿಶ್ವಾಸವಿದೆ. ನಿಮಗೂ ಉಪಕಾರ ಸ್ಮರಣೆ ಇರಬೇಕು. ಇಲ್ಲಿ ನೀವು ನನಗೆ ಜೈಕಾರ ಹಾಕಿದರೆ ಸಾಲದು, ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ಕೂರಿಸಬೇಕು. ಆ ಜವಾಬ್ದಾರಿ ನಿಮ್ಮದು” ಎಂದು ತಿಳಿಸಿದರು.

“ಗಡಿಯಲ್ಲಿ ಸೈನಿಕ, ಶಾಲೆಯಲ್ಲಿ ಶಿಕ್ಷಕ, ಕಾರ್ಖಾನೆಯಲ್ಲಿ ಕಾರ್ಮಿಕ, ಹೊಲದಲ್ಲಿ ಕೃಷಿಕ ಇರುತ್ತಾನೆ. ಇವರು ನಮ್ಮ ಕೈನ ನಾಲ್ಕು ಬೆರಳುಗಳಾದರೆ, ನಮ್ಮ ಇಂಧನ ಇಲಾಖೆ ನೌಕರರು ಹೆಬ್ಬೆಟ್ಟಿನಂತೆ ಐದನೇ ಬೆರಳಾಗಿದ್ದಾರೆ. ನೀವು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಾನು ಕಾಂಗ್ರೆಸ್ ಅಧ್ಯಕ್ಷನಾಗಿ, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ನಿಮಗೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು.

ಅದರಲ್ಲಿ ನಾವು ಮೊದಲು ಘೋಷಣೆ ಮಾಡಿದ್ದು 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು. ಆಮೂಲಕ ಇಂತಹ ಯೋಜನೆ ಕೊಟ್ಟ ಮೊದಲ ರಾಜ್ಯ ಕರ್ನಾಟಕವಾಯಿತು. ಇಂದು ರಾಜ್ಯದಲ್ಲಿ 1.60 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ನೀಡಲಾಗಿದೆ. ಇದೆಲ್ಲವೂ ನಿಮ್ಮ ಸಹಕಾರದಿಂದ ಸಾಧ್ಯವಾಗಿದೆ” ಎಂದು ತಿಳಿಸಿದರು.

“ನಿಮ್ಮ ಬೇಡಿಕೆಗಳು ನಮ್ಮ ಗಮನದಲ್ಲಿವೆ. ಒಪಿಎಸ್ ಕೂಡ ನಮ್ಮ ಪ್ರಣಾಳಿಕೆಯಲ್ಲಿದೆ. ಆ ಬಗ್ಗೆ ಚಿಂತೆ ಮಾಡಬೇಡಿ. ಈ ಹಿಂದೆ ಬಡ್ತಿ ವಿಚಾರ ಬಂದಾಗ ನಾನು ಒಂದೇ ದಿನ ತೀರ್ಮಾನ ಮಾಡಿದ್ದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ನಿಮ್ಮ ಬದುಕಿಗಾಗಿ ಕೆಲಸ ಮಾಡುತ್ತದೆ. ಐಪಿಎಸ್ ಅಧಿಕಾರಿಗೆ ಎಷ್ಟು ವೇತನ ಬರುತ್ತದೋ ಅಷ್ಟೇ ವೇತನ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಮುಖ್ಯ ಇಂಜಿನಿಯರ್ ಗಳಿಗೂ ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಜತೆಗಿರಲಿ” ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!