ನವದೆಹಲಿ: ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
25 ವರ್ಷದ ರೈಹಾನ್ ವಾದ್ರಾ ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಮದುವೆಗೆ ಎರಡೂ ಕುಟುಂಬಗಳೂ ಒಪ್ಪಿಗೆ ಸೂಚಿಸಿದ್ದಾಗಿ ತಿಳಿದುಬಂದಿದೆ. ಅವಿವಾ ಬೇಗ್ ಹಾಗೂ ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಎರಡೂ ಕುಟುಂಬಗಳು ಪರಸ್ಪರ ನಿಕಟ ಸಂಪರ್ಕದಲ್ಲಿವೆ ಎನ್ನಲಾಗಿದೆ.
ರೈಹಾನ್ ವಾದ್ರಾ ಒಬ್ಬ ದೃಶ್ಯ ಕಲಾವಿದರಾಗಿದ್ದು, ಕಳೆದ 10 ವರ್ಷಗಳಿಂದ ಕ್ಯಾಮೆರಾ ಲೆನ್ಸ್ ಮೂಲಕ ಜಗತ್ತಿನ ವಿಭಿನ್ನ ಆಯಾಮಗಳನ್ನು ಸೆರೆಹಿಡಿಯುತ್ತಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಸಮಕಾಲೀನ ಕಲಾ ಗ್ಯಾಲರಿಯಾದ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ಅವರ ಜೀವನಚರಿತ್ರೆ ಲಭ್ಯವಿದೆ. ಅವರ ಛಾಯಾಗ್ರಹಣ ಪೋರ್ಟ್‌ಫೋಲಿಯೊದಲ್ಲಿ ವನ್ಯಜೀವಿ ಸೇರಿದಂತೆ ಹಲವು ಕ್ಷೇತ್ರಗಳು ಸೇರಿವೆ.
ತಾಯಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರೋತ್ಸಾಹದಿಂದ ರೈಹಾನ್ ಬಾಲ್ಯದಿಂದಲೇ ಛಾಯಾಗ್ರಹಣದ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರ ಅಜ್ಜ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೊ ಛಾಯಾಗ್ರಹಣದ ಮೇಲೆ ವಿಶೇಷ ಆಸಕ್ತಿ ಇತ್ತು ಎನ್ನಲಾಗಿದೆ. ಅವಿವಾ ಬೇಗ್ ಕೂಡ ವೃತ್ತಿಯಿಂದ ಛಾಯಾಗ್ರಾಹಕಿ ಹಾಗೂ ನಿರ್ಮಾಪಕಿಯಾಗಿದ್ದಾರೆ. ಅವರ ಇನ್ಸ್ಟಾಗ್ರಾಮ್ ಬಯೋದಲ್ಲಿಯೇ ಈ ಮಾಹಿತಿಯನ್ನು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ.



