ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಮ್ಮ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ನಡೆದ ಅಮಾನವೀಯ ದಾಳಿಯಲ್ಲಿ ಹುತ್ಮಾತರಾದ ಭಾರತೀಯರಿಗೆ ಹಾಗೂ ವಿದೇಶಿ ಪ್ರಜೆಗಳಿಗೆ ಪಟ್ಟಣದ ವಿವಿಧ ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬುಧವಾರ ಪಟ್ಟಣದ ಹಾವಳಿ ಹನುಮಂತದೇವರ ದೇವಸ್ಥಾನದ ಹತ್ತಿರ ದೀಪ ಬೆಳಗಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಬಸವರಾಜ ಅರಳಿ, ಶ್ರೀರಾಮಸೇನಾ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಹಿಂದೂ ಮಹಾಸಭಾ ಗಣಪತಿ ಅಧ್ಯಕ್ಷ ಫಕ್ಕೀರೇಶ ಅಣ್ಣಿಗೇರಿ, ರವಿ ಪುರಾಣಿಕಮಠ ಮಾತನಾಡಿ, ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿ ಅತ್ಯಂತ ಹೇಯ ಮತ್ತು ಬರ್ಬರವಾಗಿದೆ. ಉಗ್ರರ ಈ ಹೇಡಿ ಕೃತ್ಯವನ್ನು ಪ್ರತಿಯೊಬ್ಬರೂ ಬಲವಾಗಿ ಖಂಡಿಸಬೇಕು. ಇಂತಹ ಹೇಯ ಕೃತ್ಯಕ್ಕೆ ಭಾರತ ಶೀಘ್ರ ತಕ್ಕ ಉತ್ತರ ನೀಡಲಿದೆ. ಭಾರತದಲ್ಲಿನ ಹಿಂದೂಗಳ ಮೇಲೆ ಆಕ್ರಮಣ ನಡೆಸಿದರೆ ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದೆ ಭಯೋತ್ಪಾಕದರ ಮೇಲೆ ಯಾವುದೇ ಕರುಣೆ ಇಲ್ಲದೆ ಅವರನ್ನು ಮುಗಿಸುವ ತನಕ ಭಾರತ ವಿರಮಿಸುವಂತಿಲ್ಲ. ದಾಳಿಯಲ್ಲಿ ಹಿಂದೂಗಳೇ ಎನ್ನುವದನ್ನು ಖಚಿತಪಡಿಸಿಕೊಂಡು ಹತ್ಯೆ ಮಾಡಲಾಗಿದ್ದು, ಈ ಹೇಯ ಕೃತ್ಯವನ್ನು ಸಮಸ್ತ ಹಿಂದೂ ಸಮಾಜ ಖಂಡಿಸುತ್ತದೆ. ಉಗ್ರರ ಗುಂಡಿಗೆ ಬಲಿಯಾದವರಿಗೆ ಸಮಸ್ತ ಹಿಂದೂ ಸಮಾಜದ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇವೆ. ಅವರ ಕುಟುಂಬದ ದುಃಖದಲ್ಲಿ ಹಿಂದೂ ಸಮಾಜವು ಭಾಗಿಯಾಗಿದೆ, ಅವರಿಗೆ ಪರಮಾತ್ಮ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ನವೀನ ಕುಂಬಾರ, ಮಂಜುನಾಥ ಮುಳುಗುಂದ, ಹನುಮಂತ ರಾಮಗೇರಿ, ಪ್ರವೀಣ ಬನ್ನಿಕೊಪ್ಪ, ಜಗದೀಶ್ ಗೋಡಿ, ಪ್ರವೀಣ ಕುಂಬಾರ, ಬಸವರಾಜ ಹಳ್ಳಿಕೇರಿ, ಚಂದ್ರು ಕರ್ಜಕಣ್ಣವರ, ಗಣೇಶ ಕುಂಬಾರ, ಅಭಿಷೇಕ ಕ್ಯಾದಿಗೇರಿ, ಈರಣ್ಣ ಶೆಟ್ಟಿಕೇರಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದ್ದರು.