ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲಾಗುತ್ತಿರುವುದು ಹಾಗೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಉಪಜಾತಿಗಳ ಹಿಂದೆ ಕ್ರೈಸ್ತ ಎಂಬ ಉಪಜಾತಿ ಸೇರಿಸಿ ಮತಾಂತರಕ್ಕೆ ಹುನ್ನಾರ ನಡೆಸಲಾಗುತ್ತಿದೆ ಎಂದು ಶಿರಹಟ್ಟಿಯಲ್ಲಿ ಹಿಂದೂ ಪರ ಸಂಘಟನೆಗಳ ಒಕ್ಕೂಟದಿಂದ ಸೆ. 20ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂತೋಷ ಕುರಿ, ರಾಜೀವರೆಡ್ಡಿ ಬಮ್ಮನಕಟ್ಟಿ ತಿಳಿಸಿದರು.
ಶಿರಹಟ್ಟಿಯ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಇತ್ತೀಚಿನ ದಿನಗಳಲ್ಲಿ ಹಿಂದೂ ಪರ ಮುಖಂಡರ ಬಂಧನವಾಗುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯಗಳು ಹೆಚ್ಚಿವೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಉಪಜಾತಿಗಳ ಹಿಂದೆ ಕ್ರೈಸ್ತ ಎಂಬ ಉಪಜಾತಿ ಸೇರಿಸಿ ಹೊಸ ಉಪಜಾತಿ ಸೃಷ್ಟಿಸುತ್ತಿರುವುದು ಮತಾಂತರಕ್ಕೆ ಕಾರಣವಾಗುತ್ತಿರುವ ರಾಜ್ಯ ಸರ್ಕಾರದ ದಮನ ನೀತಿಯನ್ನು ಖಂಡಿಸಿ ಶಿರಹಟ್ಟಿ ತಾಲೂಕಿನ ಹಿಂದೂ ಪರ ಸಂಘಟನೆಗಳ ಒಕ್ಕೂಟದಿಂದ ಸೆ. 20 ರಂದು ಶಿರಹಟ್ಟಿ ಪಟ್ಟಣದ ಪೇಟೆ ಶ್ರೀ ಹನುಮಂತ ದೇವರ ದೇವಸ್ಥಾನದಿಂದ ತಹಸೀಲ್ದಾರ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಹಿಂದೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಣ್ಣ ಕಂಬಳಿ, ಪರಶುರಾಮ ಡೊಂಕಬಳ್ಳಿ, ಅರುಣ ತಿರ್ಲಾಪೂರ, ಪ್ರಕಾಶ ಕಲ್ಯಾಣಿ, ಯಲ್ಲಪ್ಪ ಇಂಗಳಗಿ, ಮಂಜುನಾಥ ಸೊಂಟನೂರ, ಸಂತೋಷ ತೋಡೆಕಾರ, ದೇವು ಪೂಜಾರ, ಮಂಜುನಾಥ ಕಾಳಗಿ ಮುಂತಾದವರು ಉಪಸ್ಥಿತರಿದ್ದರು.