ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಉತ್ಸವ ಮೂರ್ತಿಯ ಮೆರವಣಿಗೆಯು ಮಂಗಳವಾರ ಸಾಯಂಕಾಲ 5 ಗಂಟೆಗೆ ಆರಂಭಗೊಂಡು ಸಂಜೆ ಶ್ರೀ ಗವಿಮಠ ತಲುಪಿತು. ಜಡೇಗೌಡರ ಮನೆಯಿಂದ ಪ್ರಾರಂಭಗೊಂಡು ಕೋಟೆ ಮಠದಿಂದ ಪಲ್ಲಕ್ಕಿ ಹೊರಟು ಗಡಿಯಾರ ಕಂಬ ವೃತ್ತದಲ್ಲಿ, ಮುದ್ದಾಬಳ್ಳಿಯಿಂದ ಬರುವ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು, ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ.ಶ್ರೀ ವೀರನಗೌಡರು ಪಾಟೀಲ ಮತ್ತು ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಪಾಟೀಲರ ಮನೆಯಿಂದ ಬರುವ ಕಳಸ ಹಾಗೂ ಮಂಗಳಾಪೂರದಿಂದ ಬರುವ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು ಜವಾಹರ್ ರಸ್ತೆಯಲ್ಲಿ ಕೂಡಿಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ಕವಲೂರು ಓಣಿ, ಸಿದ್ಧೇಶ್ವರ ವೃತ್ತದ ಗವಿಶ್ರೀ ನಗರದ 3ನೇ ಮುಖ್ಯರಸ್ತೆ ಮೂಲಕ ಭವ್ಯ ಮೆರವಣಿಗೆ ಜರುಗಿತು.
ಮೆರವಣಿಗೆಯ ಸಂದರ್ಭದಲ್ಲಿ ನಂದಿಕೋಲು, ಡೊಳ್ಳು, ಭಜನೆ, ಭಾಜಾ-ಭಜಂತ್ರಿ, ಪಂಜು, ಇಲಾಲು ಹಾಗೂ ನಾಡಿನ ವೈಭವವನ್ನು ಬಿಂಬಿಸುವ ಅನೇಕ ಜಾನಪದ ವಿಶೇಷ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದವು. ಮೆರವಣಿಗೆಯಲ್ಲಿ ಸಹಸ್ರಾರು ಸದ್ಭಕ್ತರು ಹಾಗೂ ಗೌಡರ ಮನೆತನದವರು ಪಾಲ್ಗೊಂಡಿದ್ದರು.