ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಭಾರತ ಕಂಡ ಅದ್ಭುತ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರ ಬೆಂಗಳೂರು ನಿವಾಸದಲ್ಲಿ ಶಾಸಕ ಜಿ.ಎಸ್. ಪಾಟೀಲರು ಸಿ.ಎನ್.ಆರ್. ರಾವ್ ದಂಪತಿಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಭಾರತದ ಖ್ಯಾತ ರಸಾಯನಶಾಸ್ತ್ರಜ್ಞರು ಹಾಗೂ ವಸ್ತು ವಿಜ್ಞಾನ ಕ್ಷೇತ್ರದ ಪಂಡಿತರಾದ ಪ್ರೊ. ಸಿ.ಎನ್.ಆರ್. ರಾವ್ ಅವರು ವಿಜ್ಞಾನ ಲೋಕದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. ಅವರು ಭಾರತೀಯ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ್ದು, ವಿಶೇಷವಾಗಿ ನ್ಯಾನೋ ವಿಜ್ಞಾನ, ರಸಾಯನಶಾಸ್ತ್ರ ಮತ್ತು ವಸ್ತು ವಿಜ್ಞಾನದಲ್ಲಿ ಹೊಸ ದಾರಿಗಳನ್ನು ತೆರೆದಿದ್ದಾರೆ. 60ಕ್ಕೂ ಹೆಚ್ಚು ಪುಸ್ತಕಗಳು, 1800ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಚಿಸಿರುವ ಅವರು ಯುವ ವಿಜ್ಞಾನಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಪ್ರೊ. ಸಿ.ಎನ್.ಆರ್. ರಾವ್ ಅವರ ಶ್ರೇಷ್ಠ ವಿಜ್ಞಾನ ಸೇವೆಗಳನ್ನು ಗುರುತಿಸಿ ನಮ್ಮ ಕುಟುಂಬದಿಂದ ವಿಶೇಷವಾಗಿ ಅವರನ್ನು ಸನ್ಮಾನಿಸಲು ಹೆಮ್ಮೆಯೆನಿಸುತ್ತದೆ. ಅವರ ಸಾಧನೆಗಳು ಭವಿಷ್ಯದ ಯುವಕರಿಗೆ ಪ್ರೇರಣೆ ನೀಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.



