ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಿ.7ರಂದು ತೋಂಟದ ಗದುಗಿನ ಸಿದ್ಧಲಿಂಗಶ್ರೀ ಕನ್ನಡ ಭವನದ ಕಸಾಪ ಕಾರ್ಯಾಲಯದಲ್ಲಿ ಸಂಜೆ 6 ಗಂಟೆಗೆ ಜರುಗುವ ದತ್ತಿ ಕಾರ್ಯಕ್ರಮದಲ್ಲಿ ‘ಪ್ರೊ. ಸಿ.ವಿ. ಕೆರಿಮನಿ ತಿರುಳ್ಗನ್ನಡ ಸಿರಿ’ ದತ್ತಿ ಪ್ರಶಸ್ತಿಯನ್ನು ಖ್ಯಾತ ಜಾನಪದ ವಿದ್ವಾಂಸರಾದ ಡಾ. ಸಿದ್ಧಣ್ಣ ಜಕಬಾಳ ಇವರಿಗೆ ಪ್ರದಾನ ಮಾಡುವ ಸಮಾರಂಭ ಜರುಗಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಳ್ಳಟ್ಟಿಯ ಶ್ರೀ ರಾಮಲಿಂಗೇಶ್ವರ ದಾಸೋಹಮಠದ ಪೂಜ್ಯ ಮ.ನಿ.ಪ್ರ. ಬಸವರಾಜ ಮಹಾಸ್ವಾಮಿಗಳು ವಹಿಸುವರು. ಕಸಾಪ ಮಾಜಿ ಅಧ್ಯಕ್ಷ ಪ್ರೊ. ಎ.ಬಿ. ಹಿರೇಮಠ ಪ್ರಶಸ್ತಿ ಪ್ರದಾನ ಮಾಡುವರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು. ಲಲಿತಾ ಸಿ.ಕೆರಿಮನಿ ಉಪಸ್ಥಿತರಿರುವರು.
ಡಾ. ಸಿದ್ಧಣ್ಣ ಜಕಬಾಳ ಅವರು ನಮ್ಮ ನಾಡಿನ ಹೆಸರಾಂತ ಜನಪದ ವಿದ್ವಾಂಸರು. ಬರೆಹ, ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಜನಪದ ಕಲಾ ಪ್ರಕಾರವನ್ನು ಇಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ.
ಗದುಗಿನ ಕೆ.ಎಸ್.ಎಸ್. ಪದವಿ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 17ಕ್ಕೂ ಅಧಿಕ ಪುಸ್ತಕಗಳನ್ನು, ನೂರಾರು ಲೇಖನಗಳನ್ನು ಬರೆದಿದ್ದಾರೆ. ರಾಷ್ಟç ಹಾಗೂ ರಾಜ್ಯಮಟ್ಟದ ಅನೇಕ ವಿಚಾರಗೋಷ್ಟಿಗಳಲ್ಲಿ ಭಾಗವಹಿಸಿ ನವೀನ ವಿಚಾರಗಳನ್ನು ಮಂಡಿಸಿದ್ದಾರೆ.
ದೊಡ್ಡಾಟ ಹಾಗೂ ಸಣ್ಣಾಟಗಳ ಹಸ್ತಪ್ರತಿ ಹಾಗೂ ಜನಪದ ಹಾಡುಗಳ ಧ್ವನಿ ಸುರಳಿಗಳನ್ನು ಸಂಗ್ರಹಿಸಿದ್ದಾರೆ. ಜನಪದ ಹಾಡು ಹಾಗೂ ವಾದ್ಯಗಳನ್ನು ನುಡಿಸುವದರಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಇವರು ಅನೇಕ ಪ್ರಶಸ್ತಿ-ಪುರಸ್ಕಾರಗಳಿಂದ ಭಾಜನರಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು, ಪರಿಷತ್ತಿನ ಸದಸ್ಯರು, ಆಸಕ್ತರು ಭಾಗವಹಿಸಬೇಕೆಂದು ಕಾರ್ಯದರ್ಶಿಗಳಾದ ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ದತ್ತಪ್ರಸನ್ನ ಪಾಟೀಲ, ಶ್ರೀಕಾಂತ ಬಡ್ಡೂರ ಪ್ರಕಟನೆಯಲ್ಲಿ ಕೋರಿದ್ದಾರೆ.
ಪ್ರೊ. ಸಿ.ವಿ. ಕೆರಿಮನಿ ಅವರು ಬರಹಗಾರರಾಗಿ, ಪ್ರಾಚಾರ್ಯರಾಗಿ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ೩೦ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಇವರ ಹೆಸರಿನಲ್ಲಿ ಕುಟುಂಬವರ್ಗ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿದೆ. ಇದರ ಪ್ರಥಮ ಪ್ರಶಸ್ತಿಯನ್ನು ಜಾನಪದ ತಜ್ಞ ಡಾ. ಸಿದ್ದಣ್ಣ ಜಕಬಾಳ ಅವರಿಗೆ ನೀಡಲಾಗುತ್ತಿದೆ.