ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳು, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ತಜ್ಞರಾದ ಪ್ರೊ. ಶಿವಾನಂದ ಪಟ್ಟಣಶೆಟ್ಟರಿಗೆ ಅಥಣಿ ಮೋಟಗಿಮಠದ ಪ್ರತಿಷ್ಠಿತ `ಸಮಾಜಸೇವಾಭೂಷಣ’ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಜ.11ರಂದು ಅಥಣಿ ಮೋಟಗಿಮಠದಲ್ಲಿ ನೆರವೇರಲಿದೆ.
ಪೂಜ್ಯ ಲಿಂ.ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವದ ಅಂಗವಾಗಿ ಈ ಪ್ರಶಸ್ತಿ ಪುರಸ್ಕಾರ ಸಮಾರಂಭ ನೆರವೇರುತ್ತಿದ್ದು, ದಿ.11ರಂದು ಮುಂಜಾನೆ ಜರುಗುವ ಲಿಂಗೈಕ್ಯ ಶತಮಾನೋತ್ಸವದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು, ಡಂಬಳ-ಗದಗ ತೋಂಟದಾರ್ಯಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ನೇತೃತ್ವ ವಹಿಸುವರು. ದೆಹಲಿ ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು.
ಶಿವಾನಂದ ಪಟ್ಟಣಶೆಟ್ಟರು ಕೇವಲ ಮಠ ಮಾತ್ರವಲ್ಲದೇ ಸಮಾಜದ ಅನೇಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಜನಾನುರಾಗಿಗಳು. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾಗಿ, ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾಗಿ, ಹಂಪಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿ, ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ ಸಮಿತಿಯ ವ್ಯವಸ್ಥಾಪಕ ಸದಸ್ಯರಾಗಿ, ಗದಗ ಜಿಲ್ಲಾ ಅರ್ಥಶಾಸ್ತç ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ, ಗದಗ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ಜಗದ್ಗುರು ತೋಂಟದಾರ್ಯ ನೌಕರರ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಜಗದ್ಗುರು ತೋಂಟದಾರ್ಯ ಕ್ರೆಡಿಟ್ ಸಹಕಾರಿ ನಿಗಮದ ಅಧ್ಯಕ್ಷರಾಗಿ, ಗದಗ ಕೆ.ಎಲ್.ಇ ಸಂಸ್ಥೆಯ ಜೆ.ಟಿ ಮಹಾವಿದ್ಯಾಲಯದ ಸ್ಥಾನಿಕ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಯುತರಿಗೆ `ಸಮಾಜಸೇವಾಭೂಷಣ’ ಪ್ರಶಸ್ತಿ ಲಭಿಸಿದ್ದಕ್ಕೆ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ವಿದ್ಯಾಪೀಠದ ನೌಕರರು ಹಾಗೂ ಅಭಿಮಾನಿಗಳು-ಶಿಷ್ಯರು ಸಂತಸ ವ್ಯಕ್ತಪಡಿಸಿದ್ದಾರೆ.