ಮುಂಬೈ: ಮಲಾಡ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಓಂಕಾರ್ ಶಿಂಧೆ (27) ಎಂದು ಗುರುತಿಸಲಾಗಿದೆ. ಮೃತ ಪ್ರಾಧ್ಯಾಪಕರಾದ ಅಲೋಕ್ ಸಿಂಗ್, ವಿಲೇ ಪಾರ್ಲೆಯ ಪ್ರಮುಖ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಪ್ರೊ. ಅಲೋಕ್ ಸಿಂಗ್ ಮತ್ತು ಓಂಕಾರ್ ಶಿಂಧೆ ಇಬ್ಬರೂ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಣ್ಣ ವಿಚಾರಕ್ಕೆ ಜಗಳ ಆರಂಭವಾಗಿದೆ. ಮಾತಿನ ಚಕಮಕಿ ತೀವ್ರಗೊಂಡು, ತಾಳ್ಮೆ ಕಳೆದುಕೊಂಡ ಆರೋಪಿ ಹರಿತವಾದ ಚಾಕುವನ್ನು ಹೊರತೆಗೆದು ಪ್ರಾಧ್ಯಾಪಕರ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಲೋಕ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಳಿಕ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ವ್ಯಕ್ತಿಯೊಬ್ಬರು ಪಾದಚಾರಿ ಸೇತುವೆ (FOB) ದಾಟಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳ ಆಧಾರದ ಮೇಲೆ ಬೊರಿವಲಿ ಜಿಆರ್‌ಪಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.



