ವಿಜಯಸಾಕ್ಷಿ ಸುದ್ದಿ, ಕಲಬುರ್ಗಿ: ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಗಳಿಸಿದ ಸಂಪತ್ತು ಸತ್ಕಾರ್ಯಗಳಿಗೆ ಸಲ್ಲಬೇಕು. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಅದ್ಭುತ ಪ್ರಗತಿ ಕಾರ್ಯ ಮಾಡಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಬಬಲಾದ (ಎಸ್) ಗ್ರಾಮದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶ್ರೀ ಮಲ್ಲಿಕಾರ್ಜುನ ಬೃಹನ್ಮಠದ 61ನೇ ಜಾತ್ರಾ ಮಹೋತ್ಸವ ಹಾಗೂ ಸಿದ್ಧಶ್ರೀ ಸಭಾ ಭವನ ಲೋಕಾರ್ಪಣೆ ಅಂಗವಾಗಿ ಜರುಗಿದ ಧರ್ಮ ಸಂಸ್ಕೃತಿ ಸಂವರ್ಧನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ, ದೇಶ ಮನುಷ್ಯನ ಎರಡು ಕಣ್ಣು. ನೀತಿ-ನಿಯಮ ಇಲ್ಲದೇ ಸಮಾಜ ನಾಡು ಬೆಳೆಯಲಾರದು. ಧರ್ಮ ಮತ್ತು ಧರ್ಮಾಚರಣೆಯಿಂದ ಮಾನವನ ಬದುಕು ಉಜ್ವಲಗೊಳ್ಳುತ್ತದೆ. ಹಣ ಅಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ದೇಶ-ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಚಿಂತಿಸಲಾರ. ನೆಮ್ಮದಿಯ ಬದುಕಿಗೆ ಧರ್ಮ ಬೇಕು. ಸಂತೃಪ್ತಿ-ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸಭಾಭವನ ಉದ್ಘಾಟಿಸಿ ಮಾತನಾಡಿ, ಶ್ರೀ ಮಠದ ಚಾರಿತ್ರಿಕ ಇತಿಹಾಸದಲ್ಲಿ ಈ ದಿನ ಅವಿಸ್ಮರಣೀಯ ದಿನ. ಶ್ರೀಗಳವರ ಬಹು ದಿನಗಳ ಕನಸು ನನಸಾದ ಸುದಿನ. ಶ್ರೀಗಳವರ ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಅದ್ಭುತ ಕಾರ್ಯ ಕೈಗೊಳ್ಳಲು ಸಾಧ್ಯವಾಗಿದೆ ಎಂದರು.
ನೇತೃತ್ವ ವಹಿಸಿದ ಮಠಾಧ್ಯಕ್ಷರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಸಮಾರಂಭದಲ್ಲಿ ಕಲಬುರ್ಗಿ ಡಾ. ರಾಜಶೇಖರ ಶ್ರೀಗಳು, ಅಂಕಲಗಿ ಅಭಿನವ ಗುರುಬಸವ ಶ್ರೀಗಳು, ಹೆಡಗಿಮುದ್ರಾ ಶಾಂತಮಲ್ಲಿಕಾರ್ಜುನ ಶ್ರೀಗಳು, ಶ್ರೀನಿವಾಸ ಸರಡಗಿ ರೇವಣಸಿದ್ಧ ಶ್ರೀಗಳು, ತೊನಸನಹಳ್ಳಿ ರೇವಣಸಿದ್ಧ ಚರಂತೇಶ್ವರ ಶ್ರೀಗಳು, ರಾಜೇಶ್ವರ ಘನಲಿಂಗ ರುದ್ರಮುನಿ ಶ್ರೀಗಳು, ನವಲಕಲ್ ಅಭಿನವ ಸೋಮನಾಥ ಶ್ರೀಗಳು ಪಾಲ್ಗೊಂಡು ಸಮ್ಮುಖ ವಹಿಸಿ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಆರ್. ಪಾಟೀಲ, ಎಂ.ವೈ. ಪಾಟೀಲ, ಶರನಗೌಡ ಕಂದಕೂರು, ಕೆ.ಕೆ.ಸಿ.ಸಿ ಅಧ್ಯಕ್ಷ ಶರಣು ಪಪ್ಪಾ, ಮಾಜಿ ಸಚಿವ ನರಸಿಂಹನಾಯಕ, ಚಂದು ಪಾಟೀಲ, ನೀಲಕಂಠರಾವ ಮೂಲಗೆ, ಬಿ.ಎಂ. ಹಳಿಕೋಟೆ, ರಾಜಾ ಹನುಮಪ್ಪನಾಯಕ ತಾತಾ, ಹೆಚ್.ಸಿ. ಪಾಟೀಲ, ಲಿಂಗರಜ ಅಪ್ಪ, ಸಂತೋಷ ಬಿಲಗುಂದಿ, ಶಿವಶರಣಪ್ಪ ಸೀರಿ, ಸಂತೋಷ ಪಾಟೀಲ, ಡಾ. ವಿಕ್ರಂ ಪಾಟೀಲ, ವಿಶೇಷ ಆಹ್ವಾನಿತರಾಗಿ ಬೆಂಗಳೂರು ಕೆ.ಪಿ.ಎಸ್.ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ, ಬಿಬಿಎಂಪಿ ಇಇ ಚನ್ನಬಸಪ್ಪ ಮೆಕಾಲೆ ಭಾಗವಹಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಆಶೀರ್ವಾದ ಪಡೆದರು.
ಡಿ.ಸಿ.ಸಿ.ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಕಾಳೆ ಸ್ವಾಗತಿಸಿದರು. ಅಮರಯ್ಯಸ್ವಾಮಿ ನಿರೂಪಿಸಿದರು.
ಧರ್ಮ ಸಮಾರಂಭ ಉದ್ಘಾಟಿಸಿದ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಬೆಟ್ಟ ಎಂದಿಗೂ ಬಾಗುವುದಿಲ್ಲ. ಆದರೆ ಕಷ್ಟಪಟ್ಟು ಏರಿದ ಮೇಲೆ ಅದು ನಮ್ಮ ಪಾದದ ಕೆಳಗೆ ಇರುತ್ತದೆ. ಹಿಂದೆ ಗುರು, ಮುಂದೆ ಗುರಿ ಇದ್ದಾಗ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ ಎಂದರು.