ಜಿಲ್ಲೆಯ ಅಭಿವೃದ್ಧಿ ಪಥ ತೀವ್ರಗೊಳಿಸಲು ಕ್ರಮ:ಡಾ. ಎಚ್.ಕೆ. ಪಾಟೀಲ

0
Progress review meeting with officials of various departments at district level
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತವಾಗಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಪಥ ತೀವ್ರಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ಧಿ ತೀವ್ರಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.

Advertisement

ಗದಗ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು.

Progress review meeting with officials of various departments at district level

ಹೊಸ ಆರ್ಥಿಕ ವರ್ಷ ಪ್ರಾರಂಭವಾದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರದ ಬದ್ಧತೆಯ ಕುರಿತು ಎಲ್ಲ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆಡಳಿತ ಪಾರದರ್ಶಕವಾಗಿರಬೇಕು. ಜನಸ್ನೇಹಿಯಾಗಿ ಸರ್ಕಾರಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ನಾಗರಿಕರೊಂದಿಗೆ ಗೌರವದಿಂದ ಹಾಗೂ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಗದಗ ಜಿಲ್ಲೆಯು ಇ-ಆಫೀಸ್ ನಿರ್ವಹಣೆಯಲ್ಲಿ ಪ್ರಥಮ ಸ್ಥಾನಲ್ಲಿರಬೇಕು. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಇ-ಆಫೀಸ್ ಪ್ರಾರಂಭ ಮಾಡಬೇಕು. ಆಗಸ್ಟ 12ರೊಳಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಆಡಳಿತವನ್ನು ಇ-ಆಫೀಸ್‌ನಲ್ಲಿ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಸಕಾಲ ಯೋಜನೆ ಪರಿಣಾಮಕಾರಿಯಾಗಿ ನಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಕಾಲ ಯೋಜನೆ ಹಾಗೂ ಜನತಾ ದರ್ಶನ ಕಾರ್ಯಕ್ರಮದಡಿ ಸ್ವೀಕರಿಸಲಾದ ವಿವಿಧ ಇಲಾಖೆಗಳಿಗೆ ಸಂಬಂಧಿತ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಲಾಖೆಯಲ್ಲಿ ಅಕ್ಟೋಬರ್ 2ರೊಳಗಾಗಿ ಬಾಕಿ ಇರುವ ಅರ್ಜಿ ವಿಲೇವಾರಿಗೊಳಿಸಲು ತಿಳಿಸಲಾಗಿದೆ ಎಂದರು.

ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಗದಗ ಜಿಲ್ಲೆಯು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 16ನೇ ಸ್ಥಾನ ಪಡೆದಿದ್ದು, ಮುಂದಿನ 6-8 ತಿಂಗಳಲ್ಲಿ 10ನೇ ಸ್ಥಾನದೊಳಗೆ ಬರಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲಾ ಅಭಿವೃದ್ಧಿಗಾಗಿ ವಿಜನ್ ಡಾಕ್ಯುಮೆಂಟ್ 2024-25, 25-26, 26-27 ಸಿದ್ಧಪಡಿಸಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ 400 ಕೊಠಡಿಗಳ ಕೊರತೆಯಿದ್ದು, ಸರ್ಕಾರದ ವಿವಿಧ ಯೋಜನೆಗಳ ಅನುದಾನದಿಂದ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 10,830 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹಣವನ್ನು ಬಿಡುಗಡೆ ಮಾಡಲಾಗಿದೆ. 2430 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಬಾಕಿಯಿದೆ. ಮಾಸಾಂತ್ಯದಲ್ಲಿ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

Progress review meeting with officials of various departments at district level

ಇದೇ ಸಂದರ್ಭದಲ್ಲಿ ಜನನ-ಮರಣ ನೋಂದಣಿಗಳ ಕಾರ್ಯಕ್ಕೆ ಗ್ರಾ.ಪಂ ಕಾರ್ಯದರ್ಶಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹುಲಕೋಟಿ ಗ್ರಾ.ಪಂ ಫಲಾನುಭವಿಗೆ ಜನನ ಪ್ರಮಾಣಪತ್ರ ಹಸ್ತಾಂತರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಅಭಿವೃದ್ಧಿ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಕಪ್ಪತಗುಡ್ಡದ ಅಭಿವೃದ್ಧಿ ಬಹಳ ಮುಖ್ಯವಾಗಿದ್ದು, ಅನುಷ್ಟಾನಗೊಳಿಸಲಾಗುತ್ತಿದೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ನೈಟ್ ಸಫಾರಿ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ 4 ಕೋಟಿ ರೂ.ಗಳ ಅನುದಾನ ಒದಗಿಸಲು ಆದೇಶಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ವಿವರಿಸಿದರು.

 

ಜಿಲ್ಲೆಯಲ್ಲಿ ಜನೆವರಿಯಿಂದ ಇದುವರೆಗೆ 1479 ಡೆಂಘೀ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ 1102 ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು, 70 ಡೆಂಘೀ ಪ್ರಕರಣಗಳು ಖಚಿತಪಟ್ಟಿವೆ. 49 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 32 ಜನರು ಗದಗನ ಜಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಜನ ಐಸಿಯುನಲ್ಲಿದ್ದಾರೆ. 2 ಜನರು ವೆಂಟಿಲೇಟರ್‌ನಿಂದ ಹೊರಬಂದಿದ್ದಾರೆ. ಸಾರ್ವಜನಿಕರು ಡೆಂಘೀ ಲಕ್ಷಣಗಳಿದ್ದಲ್ಲಿ ನಿರ್ಲಕ್ಷ್ಯ ವಹಿಸದೇ ತಕ್ಷಣ ಚಿಕಿತ್ಸೆಗೆ ಒಳಗಾಗಬೇಕು.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here