ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ತಾಲೂಕು ಅಗ್ರಸ್ಥಾನ ಪಡೆದಿದ್ದರೂ, ಯುವನಿಧಿ ಯೋಜನೆಯಲ್ಲಿ ಇನ್ನೂ ಪ್ರಗತಿ ಸಾಧಿಸಬೇಕಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಡಿತರ ಕಾರ್ಡ್ ಅಧಿಕಾರಿಗಳು ವಿನಾಕಾರಣ ರದ್ದು ಮಾಡುತ್ತಿದ್ದಾರೆಂಬ ಚರ್ಚೆ ನಡೆಯುತ್ತಿದ್ದು, ಪಡಿತರ ಚೀಟಿ ರದ್ದು ಮಾಡಲಾಗುತ್ತಿಲ್ಲ. ಆದಾಯ ಅಧಿಕವಿರುವ ಕುಟುಂಬಗಳ ಬಿಪಿಎಲ್ ಚೀಟಿಯನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗುತ್ತಿದೆ. ಈ ವಿಷಯವನ್ನು ಕಾರ್ಡ್ಧಾರರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಬೇಕು. ಶೇ. 100ರಷ್ಟು ಪ್ರಗತಿ ಸಾಧಿಸಲು ಎಲ್ಲ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಯೋಜನೆಗಳ ಮಹತ್ವ ಅರ್ಥಮಾಡಿಕೊಂಡು, ಅರ್ಹರಿಗೆ ಸೌಲಭ್ಯ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೆ ಸಭೆಗೆ ಮುಂಚಿತವಾಗಿ ಸರಿಯಾದ ಮಾಹಿತಿ ಒದಗಿಸುವಂತೆ ಮತ್ತು ಯುವನಿಧಿ ನೋಂದಣಿ ವಿವರ ನೀಡುವಂತೆ ಕೇಳಿಕೊಂಡರು.
ಗೃಹಲಕ್ಷ್ಮೀ ಯೋಜನೆಯಡಿ ಜುಲೈ 2025ರವರೆಗೆ ಗದಗ ತಾಲೂಕಿನಲ್ಲಿ ಒಟ್ಟು 82193 ಜನರು ಪಡಿತರ ಹೊಂದಿರುತ್ತಾರೆ. 81967 ಅರ್ಜಿಗಳು ನೋಂದಣಿಯಾಗಿದ್ದು, ಅದರಲ್ಲಿ 78986 ಅರ್ಜಿಗಳಿಗೆ ಮಂಜೂರಾತಿ ದೊರೆತು ಶೇ. 96.36ರಷ್ಟು ಪ್ರಗತಿ ಸಾಧಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಗದಗ-ಬೆಟಗೇರಿಯಲ್ಲಿ (ಐಆರ್ಎ) ಅಕ್ಟೋಬರ್ 2025ರ ಮಾಹೆಯಲ್ಲಿ ರಾಜ್ಯ ಸರಕಾರಿ ಅನ್ನಭಾಗ್ಯ ಹಂಚಿಕೆ ಯೋಜನೆಯಡಿ ಒಟ್ಟು 33746 ಪಡಿತರ ಕಾರ್ಡ್ಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳು) 5549.80 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಅಕ್ಟೋಬರ್-2025 ಮಾಹೆಯಲ್ಲಿ (ಕೇಂದ್ರ ಸರ್ಕಾರ) ಎನ್ಎಫ್ಎಸ್ಎ ಅಕ್ಕಿ ಹಂಚಿಕೆಯಡಿ ಒಟ್ಟು 33746 ಕಾರ್ಡ್ಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳು) 5856.30 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 31-10-2025ರವರೆಗೆ ಗದಗ ನಗರ ಉಪವಿಭಾಗದಲ್ಲಿ 52059 ಸ್ಥಾವರಗಳು ಅರ್ಹವಾಗಿದ್ದು, 48481 ಸ್ಥಾವರಗಳ ನೋಂದಣಿಯಾಗಿದ್ದು ಶೇ. 99.53 ಪ್ರಗತಿಯಾಗಿದೆ.
ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ 31-7-2025ರವರೆಗೆ 2159 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಜನವರಿ 2024ರಿಂದ ಜುಲೈ 2025ರವರೆಗೆ ಡಿಬಿಟಿ ಮೂಲಕ ಒಟ್ಟು 4,69,00,500 ರೂ. ಹಣ ವರ್ಗಾವಣೆಯಾಗಿದೆ ಎಂದು ಸಂಬಂಧಿತ ಅಧಿಕಾರಿಗಳು ಮಾಹಿತಿ ಒದಗಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಉಪಾಧ್ಯಕ್ಷೆ ನಿಲಮ್ಮ ಬೋಳನವರ, ಸದಸ್ಯರಾದ ಈರಣ್ಣ ಹುನಸಿಕಟ್ಟಿ, ಶರೀಫ ಬೆಳೆಯಲಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ದಯಾನಂದ ಪವಾರ, ಶಂಭು ಕಾಳೆ, ಸಾವಿತ್ರಿ ಹೂಗಾರ, ಸಂಗು ಕೆರಕಲಕಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ ಚಿಂಚಲಿ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್. ಬಾರಕೇರ ಹಾಗೂ ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.
ಯೋಜನೆಯ ಶೇ. 100ರ ಪ್ರಗತಿ ಸಾಧನೆಗೆ ಎಲ್ಲ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರ ಸಹಕಾರ ಅತ್ಯಗತ್ಯ. ಯೋಜನೆಯ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು. ಯುವನಿಧಿ ಯೋಜನೆಯಲ್ಲಿ ನೋಂದಣಿ ಆದ ಎಲ್ಲರ ಮಾಹಿತಿಯನ್ನು ಸಂಪೂರ್ಣವಾಗಿ ನೀಡಬೇಕು. ಕೇವಲ ಹಣ ಪಾವತಿದಾರರ ಮಾಹಿತಿ ಮಾತ್ರ ಸಾಲದು. ಸಭೆಗೆ ಮುಂಚಿತವಾಗಿ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ, ಪ್ರಗತಿ ಮತ್ತು ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಕೈಗೊಂಡ ಕ್ರಮಗಳ ವಿವರ ಸಭೆಗೆ ತರಬೇಕೆಂದು ಅಶೋಕ ಮಂದಾಲಿ ಸೂಚಿಸಿದರು.



