ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಿಗದಿಯಾದ ಮೀಸಲಾತಿ ಪ್ರಶ್ನಿಸಿ 1ನೆ ವಾರ್ಡಿನ ಕಾಂಗ್ರೆಸ್ ಸದಸ್ಯೆ ಲಕ್ಷ್ಮಿ ಅನಿಲಕುಮಾರ ಸಿದ್ದಮ್ಮನಹಳ್ಳಿ ಹಾಗೂ 10ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಇಮ್ತಿಯಾಜ್ ಶಿರಹಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿದಾರರ ಮನವಿ ಪುರಸ್ಕರಿಸಿದ ಧಾರವಾಡ ಹೈಕೋರ್ಟ್ ಪೀಠ, ಮುಂದಿನ ವಿಚಾರಣೆವರೆಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸದಂತೆ ತಡೆಯಾಜ್ಞೆ ನೀಡಿದೆ.
ವಕಾರಸಾಲು ಲೀಸ್ ಅವಧಿ ವಿಸ್ತರಣೆ ಠರಾವು ವಿಷಯವಾಗಿ ಪ್ರಭಾರ ಪೌರಾಯುಕ್ತರು ದಾಖಲಿಸಿದ್ದ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ಇದೀಗ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೂ ತಡೆಯಾಜ್ಞೆ ಎದುರಾಗಿದೆ.
ಸದ್ಯ ನಗರಸಭೆ 2ನೇ ಅವಧಿಯ ಮೀಸಲಾತಿಯನ್ವಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿದೆ. ಈ ಮೀಸಲಾತಿ ಘೋಷಣೆಯಲ್ಲಿ ರೋಸ್ಟರ್ ಪಾಲನೆಯಾಗಿಲ್ಲ.
2016ರಿಂದ ಈವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಸಾಮಾನ್ಯ ವರ್ಗಕ್ಕೆ ಹೆಚ್ಚಿನ ಅವಕಾಶ ಒದಗಿಬಂದಿದೆ. ಹೀಗಾಗಿ ರೋಸ್ಟರ್ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ 2ಎ ವರ್ಗಕ್ಕೆ ಘೋಷಣೆಯಾಗಬೇಕು ಎನ್ನುವುದು ಅರ್ಜಿದಾರರ ವಾದವಾಗಿದೆ. ಈ ಬಗ್ಗೆ ಆಗಸ್ಟ್ 29ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಸೆಪ್ಟೆಂಬರ್ 11ಕ್ಕೆ ವಿಚಾರಣೆ ಮುಂದೂಡಿದ್ದು, ಅಲ್ಲಿಯವರೆಗೆ ಆಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.
ವಕಾರಸಾಲು ಲೀಸ್ ವಿಸ್ತರಣೆ ವಿಚಾರವಾಗಿ ಪ್ರಭಾರಿ ಪೌರಾಯುಕ್ತರ ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ, ಮೂವರು ಬಿಜೆಪಿ ಸದಸ್ಯರಿಗೆ ಜಾಮೀನು ಸಹ ಮಂಜೂರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. ಆದರೆ ಗುರುವಾರ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯಿಂದ ಆಡಳಿತ ಪಕ್ಷ ಬಿಜೆಪಿ ಸದಸ್ಯರ ಲೆಕ್ಕಾಚಾರ ತಲೆಕೆಳಗಾದಂತಾಗಿದೆ. ಒಟ್ಟಾರೆ ನಗರಸಭೆ ಹಲವಾರು ವಿಷಯಗಳು ಹೈಕೋರ್ಟ್ ಅಂಗಳದಲ್ಲಿಯೇ ಇತ್ಯರ್ಥವಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ 2ಎ ವರ್ಗಕ್ಕೆ ನಿಗದಿ ಮಾಡಬೇಕು. ಈ ರೋಸ್ಟರ್‌ಗಳು ಬಹಳ ವರ್ಷಗಳಿಂದ ಬಂದಿಲ್ಲ ಎಂದು ನಾವು ನ್ಯಾಯಾಲಯದಲ್ಲಿ ಮನವಿ ಮಾಡಿದ್ದೇವೆ. ಇದನ್ನು ಪರಿಗಣಿಸಿರುವ ನ್ಯಾಯಾಲಯ ಸದ್ಯ ತಡೆಯಾಜ್ಞೆ ನೀಡಿದೆ.
– ಲಕ್ಷ್ಮಿ ಸಿದ್ದಮ್ಮನಹಳ್ಳಿ.
ವಾರ್ಡ್ ನಂ.1ರ ಕಾಂಗ್ರೆಸ್ ಸದಸ್ಯೆ.