ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ ಬಿ.ಎಸ್. ನೇಮಗೌಡ ಮಾಹಿತಿ
ಬಂದ್ ಹಿನ್ನೆಲೆ: ಪೊಲೀಸ್ ಪಥಸಂಚಲ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ತಾಲೂಕಾ ದಂಡಾಧಿಕಾರಿಗಳ ಅದೇಶನ್ವಯ ಅ.18ರ ರಾತ್ರಿ 10 ಗಂಟೆಯಿಂದ ಅ.20 ಬೆಳಿಗ್ಗೆ 6 ಗಂಟೆಯವರೆಗೆ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ 2023ರ ಕಲಂ.163(144) ಅಡಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಮಾಧ್ಯಮ ಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ.12ರಂದು ಗೋಸಾವಿ ಸಮಾಜದವರು ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ದುರ್ಗಾದೇವಿ ಮೂರ್ತಿ ವಿಸರ್ಜನೆ ಮೆರವಣಿಗೆಯ ದಿನ ಗೋಸಾವಿ ಮತ್ತು ಮುಸ್ಲಿಂ ಸಮಾಜದ ಕೆಲ ಯುವಕರ ನಡುವೆ ಗಲಾಟೆಯಾಗಿದೆ.
ಮರುದಿನ ಬೆಳಿಗ್ಗೆ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆ ಸಂಘಟನೆಯವರು ಠಾಣೆಗೆ ಗುಂಪಾಗಿ ಬಂದು ವಿನಾಕಾರಣ ತಂಟೆ-ತಕರಾರು ಮಾಡಿದ ಮುಸ್ಲಿಂ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ವೇಳೆ ಪಿಎಸ್‌ಐ ಗುಂಪು ಚದುರಿಸಲು ಲಾಠಿ ಪ್ರಯೋಗಿಸಿದ್ದಾರೆಂದು ಆರೋಪಿಸಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪಿಎಸ್‌ಐ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ನಂತರ ಶ್ರೀರಾಮಸೇನೆ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ಗದುಗಿಗೆ ತೆರಳಿ ಮುಸ್ಲಿಂ ಯುವಕರು ಮತ್ತು ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅ.19ರಂದು ಲಕ್ಷ್ಮೇಶ್ವರ ಬಂದ್ ಮಾಡುತ್ತೇವೆ ಎಂದು ಡಿವೈಎಸ್‌ಪಿಗೆ ಮನವಿ ಸಲ್ಲಿಸಿದ್ದಾರೆ ಮತ್ತು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೆಲವು ಪ್ರಗತಿಪರ, ಕನ್ನಡಪರ ಸಂಘಟನೆಯವರು, ಮುಖಂಡರು ಲಕ್ಷ್ಮೇಶ್ವರ ಬಂದ್‌ಗೆ ಅವಕಾಶ ಕೊಡಬಾರದು, ಪ್ರತಿಭಟನೆಗೆ ಅವಕಾಶ ಕೊಟ್ಟರೆ ಇದಕ್ಕೆ ಪ್ರತಿಯಾಗಿ ಪ್ರತಿಭಟನೆ ಮಾಡುವ ಮತ್ತು ತಡೆಯುವ ಕಾರ್ಯ ಮಾಡುತ್ತೇವೆ ಎಂದು ಪತ್ರಿಕಾಗೋಷ್ಠಿ ಮತ್ತು ಮನವಿ ಮೂಲಕ ಎಚ್ಚರಿಸಿದ್ದಾರೆ.
ಎಲ್ಲವನ್ನೂ ಸೂಕ್ಷ್ಮಮವಾಗಿ ಪರಿಶೀಲಿಸಿ ಹೋರಾಟ, ಬಂದ್, ಪ್ರತಿಭಟನೆ ಮಾಡದಂತೆ ಸಂಘಟನೆ, ಮುಖಂಡರೊಂದಿಗೆ ಚರ್ಚಿಸಿ ಮನವಿ ಮಾಡಿಕೊಳ್ಳಲಾಗಿದೆ. ಆದಾಗ್ಯೂ ಸಂಘಟನೆಯವರು ಕೇಳದೇ ಶನಿವಾರ ಬಂದ್ ಕರೆಕೊಟ್ಟಿದ್ದಾರೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆ-ಸಮಾರಂಭ, ಮೆರವಣಿಗೆ ಮಾಡುವನ್ನು, ಐದಕ್ಕಿಂತ ಹೆಚ್ಚು ಜನರು ಸೇರುವದನ್ನು, ಮಾರಕಾಸ್ತ್ರ ಬಳಸವುವುದನ್ನು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಕೃತ್ಯಗಳಲ್ಲಿ ತೊಡಗುವದನ್ನು ನಿಷೇಧಿಸಿದೆ.
ಮುಂಜಾಗೃತಾ ಕ್ರಮವಾಗಿ ಶುಕ್ರವಾರ ಪಟ್ಟಣದಲ್ಲಿ ಪೊಲೀಸ್ ಪಡೆಯಿಂದ ಜಾಗೃತಿ ಜಾಥಾ ಮಾಡಲಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ವ್ಯಾಪಾರ-ವಹಿವಾಟು, ಶಾಲಾ-ಕಾಲೇಜು, ಸಾರಿಗೆ ಸಂಚಾರ ಎಲ್ಲವೂ ಎಂದಿನಂತೆ ನಡೆಯುತ್ತವೆ. ಸಾರ್ವಜನಿಕರು ನಿರ್ಭೀತಿಯಿಂದ ನಿತ್ಯದ ಕಾರ್ಯ ಚಟುವಟಿಕೆ ಮಾಡಬಹುದು ಎಂದರು.
ಈ ವೇಳೆ ತಹಸೀಲ್ದಾರ ವಾಸುದೇವ ಎಂ.ಸ್ವಾಮಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ತನಿಖಾಧಿಕಾರಿ ಮಹಾಂತೇಶ ಸಜ್ಜನ ಇದ್ದರು.
ಪಿಎಸ್‌ಐ ಈರಪ್ಪ ರಿತ್ತಿ ಅವರ ಮೇಲೆ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಡಿವೈಎಸ್‌ಪಿ ಮಹಾಂತೇಶ ಸಜ್ಜನ ಅವರ ನೇತೃತ್ವದಲ್ಲಿ ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಿ ತನಿಖೆ ಕೈಗೊಂಡಿದೆ. ಇದನ್ನು ಹೊರತುಪಡಿಸಿ ಬೇರೆ ಏನಾದರೂ ವಿಷಯಗಳು ಸಾರ್ವಜನಿಕರಿಂದ ಬಂದರೂ ಅದನ್ನು ಪರಿಗಣಿಸಲಾಗುವದು ಎಂದು ಎಸ್‌ಪಿ ಬಿ.ಎಸ್. ನೇಮಗೌಡ ತಿಳಿಸಿದರು.
ಬಂದ್ ಹಿನ್ನೆಲೆ: ಪೊಲೀಸ್ ಪಥಸಂಚಲ

ಪಟ್ಟಣದಲ್ಲಿ ಶನಿವಾರ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಲಂ 163ರ ಅಡಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಪೊಲೀಸ್ ಪಡೆಯಿಂದ ಪಥಸಂಚಲ ನಡೆಸಲಾಯಿತು.
ಪಟ್ಟಣದಲ್ಲಿ ಯಾವುದೇ ರೀತಿಯ ಬಂದ್, ಪ್ರತಿಭಟನೆ ಹಾಗೂ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಎಸ್‌ಪಿ ನೇತೃತ್ವದಲ್ಲಿ ಮೂವರು ಡಿವೈಎಸ್‌ಪಿ, 10 ಸಿಪಿಐ, 25ಪಿಎಸ್‌ಐ, ಕೆಎಸ್‌ಆರ್‌ಪಿ ತುಕಡಿ, ಡಿಆರ್, ಗೃಹ ರಕ್ಷಕರು ಸೇರಿ 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.