ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತುಂಗಭದ್ರಾ ನದಿಯಿಂದ ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿಯನ್ನು ಸೋಮವಾರ ಶಾಸಕ ಡಾ. ಚಂದ್ರು ಲಮಾಣಿ ಪರಿಶೀಲಿಸಿದರು.
ಲಕ್ಷ್ಮೇಶ್ವರ-ಬಟ್ಟೂರು ಮಾರ್ಗದಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, 2017ರಲ್ಲಿ ಆರಂಭಗೊಂಡಿರುವ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ 20 ಬೃಹತ್ ಕೆರೆಗಳನ್ನುತುಂಬಿಸುವ ಯೋಜನೆಯ ಕಾಮಗಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದು ವಿಳಂಬವಾಗಿತ್ತು. 140 ಕೋಟಿ ರೂ ವೆಚ್ಚದಲ್ಲಿ ಹೊಳೆಇಟಗಿ ಗ್ರಾಮದ ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿಯ ದಡದಲ್ಲಿ ಜಾಕ್‌ವೆಲ್ ನಿರ್ಮಿಸಿ ಅಲ್ಲಿಂದ ನೀರನ್ನು ಎತ್ತುವಳಿ ಮಾಡಲಾಗುತ್ತದೆ. ತಾಲೂಕಿನ ಹೊಳಲಮ್ಮ ದೇವಿ ಗುಡ್ಡದ ಮೇಲೆ ಜಲಸಂಗ್ರಹಗಾರ ನಿರ್ಮಿಸಿ ಅಲ್ಲಿಂದ ಗ್ರ್ಯಾವಿಟಯ ಮೂಲಕ ತಾಲೂಕಿನ ಪ್ರಮುಖ 20 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.
ಮಂಗಳೂರಿನ ಓಶಿಯನ್ ಕಂಪನಿಯು ಗುತ್ತಿಗೆ ಪಡೆದು ಅರ್ಧ ಕಾಮಗಾರಿ ಮಾಡಿದ್ದರೂ ಸುಮಾರು 115 ಕೋಟಿ ರೂ ಬಿಲ್ ತೆದುಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಒತ್ತಡ ತಂದಿದ್ದರ ಫಲವಾಗಿ ಕಾಮಗಾರಿ ಮತ್ತೆ ಆರಂಭಿಸಲಾಗಿದೆ. ಸ್ಥಳೀಯ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿ 3-4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಲಾಗಿದ್ದು, ಈಗ ಮತ್ತೆ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದರು.
ನೀರಾವರಿ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಹಾಗೂ ಶೀಘ್ರದಲ್ಲಿ ಕಾಮಗಾರಿ ಮುಗಿಸಿ, ಬೇಸಿಗೆ ಕಾಲದಲ್ಲಿ ಕೆರೆ ತುಂಬಿಸಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.


