ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯನಂತರ ದೇಶದಲ್ಲಿ ಅತ್ಯಂತ ಯಶಸ್ಸು ಕಂಡ ಸರ್ಕಾರದಿಂದ ಅನುಷ್ಠಾನಿತ ಪಂಚ ಗ್ಯಾರಂಟಿ ಯೋಜನೆಗಳು ಅರ್ಹವಿರುವ, ಕಟ್ಟ ಕಡೆಯ ಫಲಾನುಭವಿಗಳಿಗೂ ಒದಗಬೇಕು ಎಂದು ರಾಜ್ಯದ ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಎಸಿ ಆವರಣದಲ್ಲಿರುವ ತಾಲೂಕು ಗ್ಯಾರಂಟಿ ಯೋಜನೆಗಳ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಗದಗ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗದಗ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಯೋಜನೆಯ ಪ್ರಗತಿಯ ಕುರಿತು ನಿಖರ ಮಾಹಿತಿ ಒದಗಿಸಬೇಕು. ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಯ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು. ಗದಗ ತಾಲೂಕಿನಲ್ಲಿ ಗೃಹಲಕ್ಷ್ಮೀ ಹಣ ಪಡೆಯುತ್ತಿದ್ದ ಕೆಲವು ಮಹಿಳೆಯರು ಮರಣ ಹೊಂದಿದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಫಲಾನುಭವಿಯ ಪಟ್ಟಿಯಿಂದ ಕೈಬಿಡಬೇಕು ಎಂದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ತಮ್ಮ ಗಮನಕ್ಕೆ ಬಂದ ಸಮಸ್ಯೆಯೊಂದರಲ್ಲಿ, ಒಂದು ಮನೆಯ ಯಜಮಾನ ಗೃಹಜ್ಯೋತಿ ಫಲಾನುಭವಿಯಾಗಿದ್ದು, ಎಷ್ಟು ಕಡಿಮೆ ವಿದ್ಯುತ್ ಉಪಯೋಗಿಸಿದರೂ ವಿದ್ಯುತ್ ಬಿಲ್ ಬರುತ್ತಿದೆ ಎಂದು ಸಮಸ್ಯೆಯನ್ನು ಸಭೆಗೆ ತಿಳಿಸಿದರು.
ಇದಕ್ಕೆ ಉತ್ತರಿಸಿದ ಹೆಸ್ಕಾಂ ಅಧಿಕಾರಿಗಳು, ಗೃಹಜ್ಯೋತಿ ಫಲಾನುಭವಿಗಳಿಗೆ 2022-23ರ ಸಾಲಿನಲ್ಲಿ ಉಪಯೋಗಿಸಿದ ವಿದ್ಯುತ್‌ನ್ನು ಮಾಪನವಾಗಿ ತೆಗೆದುಕೊಳ್ಳುತ್ತೇವೆ. ಸರ್ಕಾರದ ಆದೇಶದ ಅನುಸಾರ ಹಿಂದಿನ ವರ್ಷದ ವಿದ್ಯುತ್ ಬಳಕೆಯನ್ನು ಮಾಪನವಾಗಿ ತೆಗೆದುಕೊಂಡಿದರಿಂದ ಹೀಗಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಶಂಭು ಕಾಳೆ, ಮೀನಾಕ್ಷಿ ಬೆನಕಣ್ಣವರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ್, ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶಸಿಂಗ್ ಮಿಟಾಡ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ಶರೀಫ್, ತಾಲೂಕು ಪಂಚಾಯತ್ ಮ್ಯಾನೇಜರ್ ರುದ್ರಪ್ಪ ಬಾವಿ, ಪಂಚ ಗ್ಯಾರಂಟಿ ಯೋಜನೆಗಳ ಅಧಿಕಾರಿಗಳು ಹಾಜರಿದ್ದರು.
ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜೊತೆಗೆ ಸಭೆ ನಡೆಸಬೇಕು. ಅನ್ನಭಾಗ್ಯದ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಜೀವನದಲ್ಲಿ ನಿಜವಾದ ಶಕ್ತಿ ಬಂದತಾಗಿದ್ದು, ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸಲು ಸಹಕಾರಿಯಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.