ವಿಜಯಸಾಕ್ಷಿ ಸುದ್ದಿ, ಗದಗ: ರೈತರಿಗೆ ನೈಸರ್ಗಿಕ ಕೃಷಿ ತಾಂತ್ರಿಕತೆಗಳನ್ನು ವರ್ಗಾವಣೆ ಮಾಡುವಲ್ಲಿ ಕೃಷಿ ಸಖಿಯರ ಪಾತ್ರ ಮುಖ್ಯವಾಗಿದೆ. ರೈತರು ನೈಸರ್ಗಿಕ ಕೃಷಿಯನ್ನು ಮಾಡಿ ಮಣ್ಣಿನ ಆರೋಗ್ಯವನ್ನು ಕಾಪಾಡಿ ಜನಸಾಮಾನ್ಯರಿಗೆ ವಿಷಮುಕ್ತ ಆಹಾರವನ್ನು ನೀಡಬೇಕೆಂದು ಉಪ ಕೃಷಿ ನಿರ್ದೇಶಕರಾದ ಸ್ಪೂರ್ತಿ ಜಿ.ಎಸ್ ಕರೆನಿಡಿದರು.
ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಹಾಗೂ ಕೃಷಿ ಇಲಾಖೆ ಗದಗ ಇವರ ಸಹಯೋಗದೊಂದಿಗೆ, ರಾಷ್ಟ್ರೀಯ ಮಿಷನ್ ಅಡಿ ನೈಸರ್ಗಿಕ ಕೃಷಿಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ) ಅ.13ರಿಂದ 17ರವರೆಗೆ ಹಮ್ಮಿಕೊಂಡಿರುವ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ತಮ್ಮ ಗ್ರಾಮದಲ್ಲಿ ರೈತರಿಗೆ ನೈಸರ್ಗಿಕ ಕೃಷಿಯ ಕುರಿತು ಮಾಹಿತಿ ವರ್ಗಾವಣೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೈಸರ್ಗಿಕ ಕೃಷಿಯನ್ನು ಮಾಡಲು ಪ್ರೇರಣೆಯನ್ನು ನೀಡಬೇಕೆಂದು ಅವರು ತಿಳಿಸಿದರು.
ಹಿರಿಯ ವಿಜ್ಞಾನಿಗಳು ಹಾಗೂ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ಮಂಕಣಿ ಮಾತನಾಡಿ, ನೈಸರ್ಗಿಕ ಕೃಷಿ ತರಬೇತಿಯು ಒಂದು ವಿಶೇಷ ತರಬೇತಿಯಾಗಿದ್ದು, ಈ ನಿಟ್ಟಿನಲ್ಲಿ ಕೃಷಿ ಸಖಿಯರು ರೈತರಿಗೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಿ, ನೈಸರ್ಗಿಕ ಕೃಷಿಯ ಮಹತ್ವವನ್ನು ರೈತರಿಗೆ ತಿಳಿಸಬೇಕು. ತಮಗೆ ಹೆಚ್ಚಿನ ಮಾಹಿತಿ ಬೇಕಾದರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೈಸರ್ಗಿಕ ಕೃಷಿ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಾರಾಯಣ ಭಂಡಿ, ವಿಜ್ಞಾನಿಗಳು (ಮಣ್ಣು ವಿಜ್ಞಾನ), ಅತಿಥಿಗಳನ್ನು ಸ್ವಾಗತಿಸಿದರು. ಹೇಮಾವತಿ ಹಿರೇಗೌಡರ್ (ತೋಟಗಾರಿಕೆ ವಿಜ್ಞಾನಿಗಳು) ಕಾರ್ಯಕ್ರಮ ನಿರೂಪಿಸಿದರು. ಡಾ. ಚೇತನ ಬಾಬು ಆರ್.ಟಿ. (ಬೇಸಾಯ ಶಾಸ್ತ್ರ ವಿಜ್ಞಾನಿಗಳು) ವಂದಿಸಿದರು.
ನೈಸರ್ಗಿಕ ಕೃಷಿಯ ಪರಿಕರಗಳ ತಯಾರಿಕೆಯ ಪ್ರಾತ್ಯಕ್ಷಿಕೆ ಹಾಗೂ ಅವುಗಳ ಮಹತ್ವ, ಮಣ್ಣಿನಲ್ಲಿರುವ ಪೋಷಕಾಂಶಗಳು, ಸಾವಯವ ಪರಿಕರಗಳು, ಹೈನು ದನಗಳ ಪೋಷಣೆ, ನೈಸರ್ಗಿಕ ಕೃಷಿಯಲ್ಲಿ ತೋಟಗಾರಿಕೆ ಹಾಗೂ ಪ್ರಗತಿಪರ ರೈತರಿಂದ ಅನುಭವ ಹಂಚಿಕೆ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೈಸರ್ಗಿಕ ಘಟಕಕ್ಕೆ ಕ್ಷೇತ್ರ ಭೇಟಿ ಈ ತರಬೇತಿಯ ವಿಶೇಷವಾಗಿದೆ.