ದಾವಣಗೆರೆ:- ಆಸ್ತಿ ಮತ್ತು ಕೌಟುಂಬಿಕ ವೈಷಮ್ಯದಿಂದ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ಚನ್ನಗಿರಿ-ಶಿವಮೊಗ್ಗ ಹೆದ್ದಾರಿಯಲ್ಲಿ ಜರುಗಿದೆ.
ಅಜ್ಜಿಹಳ್ಳಿಯ ನಿವಾಸಿ 50 ವರ್ಷದ ಹನಮಂತಪ್ಪ ಕೊಲೆಯಾದ ವ್ಯಕ್ತಿ. ಹನಮಂತಪ್ಪ ಬೈಕ್ ನಲ್ಲಿ ತೋಟಕ್ಕೆ ಹೋಗುವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ನಡೆದಿದೆ. ರಂಗನಾಥ್ ಅಲಿಯಾಸ್ ಮೈಕಲ್ ರಂಗನಾಥ ಹಾಗೂ ಕೊಲೆಯಾದ ವ್ಯಕ್ತಿಯ ಪುತ್ರ ಲಲಿತ್ ಸೇರಿ ಐದು ಜನರಿಂದ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಂಗನಾಥ್ ಕೊಲೆಗೀಡಾದ ಹನುಮಂತನ ಮೊದಲ ಹೆಂಡತಿ ಆಶಾಳ ಸಹೋದರ, ಲಲಿತ ಮೊದಲನೇ ಹೆಂಡತಿಯ ಮಗ ಎನ್ನಲಾಗಿದೆ. ಹನಮಂತಪ್ಪ, 2002 ರಲ್ಲಿ ಆಶಾಳನ್ನ ಮದ್ವೆ ಯಾಗಿದ್ದ. ಮದುವೆ ನಂತರ ಜಗಳ ಬಂದು ಹನುಮಂತ ಮತ್ತು ಆಶಾ ಇಬ್ಬರು ಪ್ರತ್ಯೇಕ ಆಗಿದ್ದರು.
2009 ರಲ್ಲಿ ಶೋಭಾ ಎಂಬುವರನ್ನ ಕೊಲೆಗೀಡಾದ ಹನುಮಂತ ಎರಡನೇ ಮದುವೆ ಆಗಿದ್ದ. ಮೊದಲ ಹೆಂಡತಿ ಆಶಾಳ ಸಹೋದರ ರಂಗನಾಥ್ ಹಾಗೂ ಪುತ್ರ ಲಲಿತ್ ಹನುಮಂತಪ್ಪನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದರು. ಇದೇ ವಿಚಾರಕ್ಕೆ ಅನೇಕ ಸಲ ಜಗಳ ಆಗಿತ್ತಂತೆ. ಬೆಳಿಗ್ಗೆ ತೋಟಕ್ಕೆ ಹೋಗುವ ವಿಚಾರ ತಿಳಿದುಕೊಂಡಿದ್ದ ಆರೋಪಿಗಳು ದಾಳಿ ಮಾಡಿ, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.