ಬೆಂಗಳೂರು:- ನನ್ನ ಬಳಿ ಇರುವ ಆಸ್ತಿ ಸುಮ್ಮನೆ ಬಂದಿಲ್ಲ, ಅದು ನಾನು ಕಷ್ಟಪಟ್ಟು ಸಂಪಾದನೆ ಮಾಡಿರೋದು ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನಿರಾಳರಾಗಿದ್ದಾರೆ.
ಬಳಿಕ ಮಾತನಾಡಿದ ಅವರು, ಇದು ತನಗೆ ಸಂದಿರುವ ಜಯಕ್ಕಿಂತ ಹೆಚ್ಚು ರಾಜ್ಯ ಸರ್ಕಾರಕ್ಕೆ ಸಂದಿರುವ ಗೆಲುವು ಅಂತ ಹೇಳಿದರು. ರಾಜಕಾರಣದಲ್ಲಿ ಶ್ರಮಪಟ್ಟು ಬೆವರು ಸುರಿಸಿ ಆಸ್ತಿ ಸಂಪಾದಿಸಿದ್ದೇನೆ, ಅದೆಷ್ಟಿದೆ ಅಂತ ತನಗೆ ಮಾತ್ರ ಗೊತ್ತು ಎಂದು ಅವರು ಹೇಳಿದರು.
ನನ್ನ ಪರವಾಗಿ ಹೈಕೋರ್ಟ್ ನಲ್ಲಿ ವಾದ ಮಾಡಿದ ವಕೀಲರಿಗೂ ಧನ್ಯವಾದ ಹೇಳುತ್ತೇನೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೂ ಈ ಪ್ರಕರಣಕ್ಕೂ ಏನು ಸಂಬಂಧ ಇದೆ? ಸಿಬಿಐ ನವರೇ ಈ ಪ್ರಕರಣಕ್ಕೆ ಅಷ್ಟು ತಲೆಕೆಡಿಸಿಕೊಂಡಿಲ್ಲ ಎಂದರು.
ಇನ್ನು ವಿಜಯಪುರ ಶಾಸಕ ಯತ್ನಾಳ್ ಅವರು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಹೋಗಲಿ. ಅವರಿಗೂ ನ್ಯಾಯಾಲಯ, ನಮಗೂ ನ್ಯಾಯಾಲಯ ಇದೆ. ನಾನು ಸಾಯೋವರೆಗೂ ಈ ರೀತಿ ಕೇಸ್‌ಗಳನ್ನ ಎದುರಿಸಲೇಬೇಕು ಎಂದರು.
ನಾವೆಲ್ಲ ಕಷ್ಟಪಟ್ಟು ಶ್ರಮಪಟ್ಟು ರಾಜಕೀಯ ಮಾಡಿಕೊಂಡು ಬರುತ್ತಿರುವವರು. ಬಿಜೆಪಿ ನಮ್ಮ ಮೇಲೆ ಷಡ್ಯಂತ್ರ ಮಾಡುತ್ತಿದೆ. ಸಾವಿರಾರು ಕೇಸುಗಳಿವೆ,ತನಿಖೆ ಮಾಡೋದಿಕ್ಕೆ ಅವಕಾಶ ಇದೆ. ಅವರು ಲೋಕಾಯುಕ್ತಕ್ಕೆ ಕೊಟ್ಟು ಮಾಡಿಸಬಹುದಿತ್ತು. ನನ್ನ ವಿರುದ್ಧ ತರಾತುರಿಯಲ್ಲಿ ತನಿಖೆಗೆ ಕೊಡುವ ಅವಶ್ಯಕತೆ ಇರಲಿಲ್ಲ ಎಂದರು.
ಹಿಂದೆ ನನ್ನನ್ನು ಜೈಲಿಗೆ ಕಳುಹಿಸಿದ್ರು. ಅವತ್ತು ಕೂಡ ಹೇಳಿದ್ದೆ ನನಗೆ ನ್ಯಾಯ ಸಿಗುತ್ತೆ ಎಂದು. ನನ್ನ ಮೇಲಿನ ಈ ಡಿ ಕೇಸ್ ಕೂಡ ವಜಾ ಆಯ್ತು. ನಾನೇನು ತಪ್ಪು ಮಾಡಿಲ್ಲ ಎಂದು ಅವತ್ತು ವಾದ ಮಾಡಿದ್ದೆ ಇವತ್ತು ಮಾಡ್ತಾ ಇದ್ದೇನೆ. ಇವತ್ತಿನ ಜಯ ನನಗಿಂತ ಹೆಚ್ಚಾಗಿ ಕರ್ನಾಟಕ ಸರ್ಕಾರಕ್ಕೆ ಸಿಕ್ಕ ಜಯವಾಗಿದೆ. ನನ್ನ ಆಸ್ತಿ ಏನಿದೆ ಅಂತ ನನಗೆ ಗೊತ್ತಿದೆ. ಈ ಸಂಬಂಧ ನಾನು ದಾಖಲೆ ಕೊಟ್ಟಿದ್ದೇನೆ. ನಮಗೆ ತೊಂದ್ರೆ ಕೊಡುವಂತಹ ಕೆಲಸ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.