ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸತತ ಮಳೆಯಿಂದ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಸೇರಿ ಬಹುತೇಕ ಬೆಳೆಗಳು ಹಾಳಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಬದುಕು ಸಾಗಿಸುವುದು ಹೇಗೆಂಬ ಚಿಂತೆಯಲ್ಲಿರುವ ರೈತ ಸಮುದಾಯಕ್ಕೆ ಆದಷ್ಟು ಬೇಗ ಬೆಳೆವಿಮೆ, ಬೆಳೆಹಾನಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ಮೂಲಕ ರೈತರು ಮಂಗಳವಾರ ಲಕ್ಷ್ಮೇಶ್ವರದಲ್ಲಿ ಪಾದಯಾತ್ರೆ ನಡೆಸಿ, ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬೆಳಿಗ್ಗೆ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ ತಾಲೂಕಿನ ರೈತ ಸಂಘಟನೆಗಳ ಮುಖಂಡರು ಮತ್ತು ಲಕ್ಷ್ಮೇಶ್ವರ ಸೇರಿ ವಿವಿಧ ಗ್ರಾಮಗಳ ರೈತರು ಮಳೆಯಿಂದಾಗಿರುವ ಸಮಸ್ಯೆ ಮತ್ತು ಪರಿಹಾರೋಪಾಯಗಳ ಕುರಿತು ಚರ್ಚಿಸಿದರು. ಬಳಿಕ ಸೋಮೇಶ್ವರ ದೇವಸ್ಥಾನದಿಂದ ಪಟ್ಟಣದ ಮುಖ್ಯ ಬಜಾರ್ ರಸ್ತೆಯ ಮೂಲಕ ತಹಸೀಲ್ದಾರ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿರುವ ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಹತ್ತಿ, ಶೇಂಗಾ, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ ಸೇರಿ ತೋಟಗಾರಿಕೆಯ ಬೆಳೆಗಳನ್ನು ರೈತರು ರೋಗಬಾಧೆ ಸೇರಿ ಹತ್ತಾರು ಸಂಕಷ್ಟಗಳ ನಡುವೆಯೂ 80 ದಿನಗಳ ಕಾಲ ಸಾವಿರಾರು ಖರ್ಚು ಮಾಡಿ ಸಂರಕ್ಷಣೆ ಮಾಡಿಕೊಂಡಿದ್ದರು. ಇದೀಗ ಸತತ ಮಳೆಯಿಂದ ಅಳಿದುಳಿದ ಬೆಳೆಗಳೂ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬದುಕೇ ಕಷ್ಟವಾದ ಪರಿಸ್ಥಿತಿಯಲ್ಲಿರುವ ರೈತರಿಗೆ ಭವಿಷ್ಯದ ಚಿಂತೆಯೊಂದಿಗೆ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಮುಗ್ಧ ರೈತರನೇಕರು ಬೆಳೆವಿಮೆ, ಬೆಳೆ ದೃಢೀಕರಣದಿಂದ ಹೊರಗುಳಿದಿದ್ದಾರೆ. ಹಿಂಗಾರಿಗೆ ಮತ್ತೆ ಭೂಮಿ ಹದಗೊಳಸಬೇಕು. ಆದ್ದರಿಂದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಕಚೇರಿಯಿಂದ ಹೊರ ಬಂದು ರೈತರ ಬೆಳೆಹಾನಿ ವೀಕ್ಷಿಸಿ ಸರ್ಕಾರಕ್ಕೆ ಸತ್ಯಾಂಶದ ವರದಿ ಸಲ್ಲಿಸಬೇಕು. ಈ ಬಗ್ಗೆ ರೈತರು ಮಾಡಬೇಕಾದ ಕೆಲಸದ ಬಗ್ಗೆ ಗ್ರಾಮ ಮಟ್ಟದಲ್ಲಿ ಡಂಗುರ ಸಾರಬೇಕು. ಬೆಳೆ ವಿಮಾ ಕಂಪನಿಗಳು ಇಲ್ಲಸಲ್ಲದ ಮಾನದಂಡ, ನಿಯಮಗಳನ್ನು ವಿಧಿಸಿ ರೈತರು ಬೆಳೆವಿಮೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.
ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಬ್ಯಾಂಕಿನವರು ಸಾಲ ಮರುಪಾವತಿಗೆ ಒತ್ತಾಯಿಸದಂತೆ ನಿರ್ದೇಶಿಸಬೇಕು. ಸತತ ಮಳೆಯಿಂದ ಮನೆಗಳು ಬಿದ್ದಿವೆ. ಕೃಷಿ ಕೆಲಸಗಳು ಸ್ಥಗಿತಗೊಂಡಿವೆ. ದನ-ಕರುಗಳ ನಿರ್ವಹಣೆ ಮತ್ತು ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಒಟ್ಟಿನಲ್ಲಿ ಸಂಕಷ್ಟದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ರೈತರ ಹಿತ ಕಾಪಾಡುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಕಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಟಾಕಪ್ಪ ಸಾತಪುತೆ, ಕಿಸಾನ್ ಜಾಗೃತಿ ವಿಕಾಸ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಲಿಂಗಶೆಟ್ಟಿ, ಹಸಿರು ಸೇನೆ ಜಿಲ್ಲಾ ಗೌರವಾಧ್ಯಕ್ಷ ಸುರೇಶ ಶಿಂಧಗಿ, ತಾಲೂಕಾಧ್ಯಕ್ಷ ನಾಗರಾಜ ಕಳ್ಳಿಹಾಳ, ಕಿಸಾನ್ ಜಾಗೃತ ವಿಕಾಸ ಸಂಘದ ತಾಲೂಕಾಧ್ಯಕ್ಷ ಸಂಜೀವ ಹುಡೇದ, ಶಿವಪುತ್ರಪ್ಪ ತಾರಿಕೊಪ್ಪ, ಆನಂದ ಅಮರಶೆಟ್ಟಿ, ಮಾದೇವಪ್ಪ ಕುಂದಗೋಳ, ಶಂಕ್ರಣ್ಣ ಬ್ಯಾಡಗಿ, ಬಸಪ್ಪ ಧರ್ಮಂತರ, ಹೊಳಲಪ್ಪ ಹಾವನೂರ, ಬಸವರಾಜ ಗಡೇದ, ಗುರುರಾಜ ಬಡಿಗೇರ, ಶಿವಪ್ಪ ಸೂಸರವಿ, ಜೆ.ವಿ. ಪಾಟೀಲ, ಎಫ್.ಟಿ. ಸಂಕನಗೌಡ್ರ, ವಿ.ಎನ್. ಕೋಳಿವಾಡ, ಡಿ.ಬಿ. ದಾನಿ, ಎಸ್.ಎಸ್. ರಾಯನಗೌಡ್ರ ಸೇರಿ ಅನೇಕರಿದ್ದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಧನಂಜಯ ಎಂ ಮಾತನಾಡಿ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಂಪೂರ್ಣ ವರದಿ ಕ್ರೋಢೀಕರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಕೃಷಿ, ಕಂದಾಯ, ತೋಟಗಾರಿಕೆ, ಇನ್ಸೂರೆನ್ಸ್ ಕಂಪನಿಗಳ ಅಧಿಕಾರಿಗಳನ್ನೊಳಗೊಂಡ ರೈತರ ಕುಂದು-ಕೊರತೆ ಸಭೆ ಕರೆದು ಚರ್ಚಿಸಲಾಗುವುದು ಎಂದರು.
“ಈ ವರ್ಷ ಹವಾಮಾನ ವೈಪರಿತ್ಯ, ರೋಗಬಾಧೆಯಿಂದ ಅಪಾರ ಪ್ರಮಾಣ ಬೆಳೆಹಾನಿಯಾಗಿದೆ. ರೈತರು ಕೊಟ್ಟ ಮನವಿ ಪತ್ರಗಳಿಗೆ ಕಿಮ್ಮತ್ತಿಲ್ಲದಂತಾಗುತ್ತಿದೆ. ಕಳೆದ 20 ದಿನಗಳಿಂದ ಸುರಿಯುತ್ತಿರುವ ದಾಖಲೆ ಸಹಿತ ಮಳೆಯಿಂದ ಬೆಳೆ ಹಾನಿಯಾಗಿದ್ದರೂ ಸಂಬಂಧಪಟ್ಟ ಯಾವ ಅಧಿಕಾರಿಗಳೂ ರೈತರ ಜಮೀನಿಗೆ ಭೇಟಿ ನೀಡಿಲ್ಲ. ಹಾನಿಯಾದ ಅರಿವೂ ಇಲ್ಲದಂತೆ ವರ್ತಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರೈತರು ಸಂಘಟಿತರಾಗಬೇಕು. ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲೆಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ”
– ಸುರೇಶ ಶಿಂಧಗಿ.
ಹಸಿರು ಸೇನೆ ಜಿಲ್ಲಾ ಗೌರವಾಧ್ಯಕ್ಷರು.