ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಯಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಶನಿವಾರ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರ್‌ಗೆ ಮನವಿ ನೀಡಲಾಯಿತು.
ಸ್ಥಳೀಯ ಪ್ರಮುಖ ರಸ್ತೆ ಹಾಗೂ ವೃತ್ತಗಳ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿ ರೋಣ ರಸ್ತೆಯ ಎಪಿಎಂಸಿ ಎದುರಿನ ಬಯಲು ಜಾಗೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಅಲ್ಲದೆ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಮೊದಲು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರೊಂದಿಗೆ ಚರ್ಚಿಸಿಲ್ಲ. ಯಾವುದೇ ಠರಾವು ಅಥವಾ ನೋಟಿಸ್ ನೀಡಲ್ಲ ಎಂದ ದೂರಿದ ವ್ಯಾಪಾರಿಗಳು, ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರ ವಹಿವಾಟನ್ನು ನೆಚ್ಚಿಕೊಂಡು ಈಗಾಗಲೇ ಸಾಲ ತಗೆದುಕೊಂಡಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಅಧಿಕಾರಿಗಳ ನಡೆ ದೊಡ್ಡ ಹೊಡೆತವನ್ನು ನೀಡಿದೆ. ಹೀಗಾಗಿ ಹಿಂದಿನಂತೆ ಪಟ್ಟಣದಲ್ಲಿ ವ್ಯಾಪಾರ, ವಹಿವಾಟಿಗೆ ಅಧಿಕಾರಿಗಳು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಭಾಷೇಸಾಬ ಕರ್ನಾಚಿ, ಮಹಾಂತೇಶ ಹೂಗಾರ, ನಾಗರಾಜ ಗಾರಗಿ, ಲಕ್ಷ್ಮಣ ಪಮ್ಮಾರ, ಅನ್ವರ ಹಿರೇಕೊಪ್ಪ, ಬಾಷೇಸಾಬ ಮಕಾನದಾರ, ಅಮರೇಶ ಚವ್ಹಾಣ ಮುಂತಾದವರಿದ್ದರು.