ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಿ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಗದಗ ಜಿಲ್ಲಾ ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡರ ಹೇಳಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಕಾನೂನು ಸಾಕ್ಷರ ಸಂವಾದದಲ್ಲಿ ಭಾಗವಹಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಡವಿಸೋಮಾಪೂರ ಸಣ್ಣ ತಾಂಡೆ ಶಾಲೆಯ 5ನೇ ತರಗತಿಯ ಮಕ್ಕಳೊಂದಿಗೆ ಸಂವಾದದಲ್ಲಿ ಮಾತನಾಡುತ್ತಾ, ಪ್ರತಿಯೊಂದು ಮಗುವಿಗೂ ಜನ್ಮ ಹೊಂದುವ, ಜೀವಿಸುವ, ಉತ್ತಮ ಆರೋಗ್ಯ ಸೇವೆ, ಪೌಷ್ಟಿಕ ಆಹಾರ ಪಡೆದು ದೇಶದ ಪ್ರಜೆ ಎಂದು ಗುರುತಿಸಿಕೊಂಡು ಬದುಕುವ ಹಕ್ಕಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದು ಸಾಂವಿಧಾನಿಕ ಮೂಲಭೂತ ಹಕ್ಕಾಗಿದೆ, ಅದರಂತೆ ಶಿಕ್ಷಣ ಪಡೆದು ವಿಕಾಸ ಹೊಂದುವ ಹಕ್ಕಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕ ಮಲ್ಲೇಶ ಡಿ.ಎಚ್, ವಕೀಲರಾದ ಎಂ.ಬಿ. ಮತ್ತೂರು, ಶಿರಸ್ತೇದಾರ್ ಬಿ.ಎಂ. ಕುಕನೂರು, ಶಿಕ್ಷಕರಾದ ಎಸ್.ಜಿ. ಅಮ್ಮಿನಭಾವಿ, ಎಸ್.ಟಿ. ಹಳಕಟ್ಟಿ, ಪಿ.ಬಿ. ಕಿಲಬನವರ, ಶಾಲಾ ಮಕ್ಕಳು ಇದ್ದರು.