ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಗೊಜನೂರ ಗ್ರಾಮದ ಬಳಿ ಮಂಗಳವಾರ ರಾತ್ರಿ ಗೋವುಗಳ ಅಕ್ರಮ ಸಾಗಾಟದ ವಾಹನ ತಡೆದು ಅದರಲ್ಲಿದ್ದ 4 ಆಕಳು ಮತ್ತು 2 ಎತ್ತುಗಳನ್ನು ಪೊಲೀಸರ ಮೂಲಕ ಗೋಶಾಲೆಗೆ ಕಳುಹಿಸುವಲ್ಲಿ ಲಕ್ಷ್ಮೇಶ್ವರದ ಹಿಂದೂ ಸಂಘಟನೆಯ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.
ರಾತ್ರಿ 1 ಗಂಟೆ ವೇಳೆಗೆ ಟಾಟಾಏಸ್ ವಾಹನದಲ್ಲಿ ಸ್ಥಳಾವಕಾಶ, ಸುರಕ್ಷಿತ ವ್ಯವಸ್ಥೆಯಿಲ್ಲದಿದ್ದರೂ ಅದರ ಚಾಲಕ-ಮಾಲಿಕ ಸೇರಿ ಜಾನುವಾರುಗಳನ್ನು ಕ್ರೌರ್ಯದಿಂದ ತುಂಬಿಕೊಂಡು ಸಾಗಿಸುತ್ತಿದ್ದಾಗ ಹಿಂದೂಪರ ಸಂಘಟನೆಯ ಕಾರ್ಯಕರ್ತರು ವಾಹನ ತಡೆದು ಗೋವು, ಎತ್ತುಗಳನ್ನು ವಾಹನ ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗೋವುಗಳನ್ನು ಸುರಕ್ಷಿತವಾಗಿ ಗದುಗಿನ ಮಹಾವೀರ ಗೋಶಾಲೆಯಲ್ಲಿ ಬಿಟ್ಟಿದ್ದಾರೆ.
ಪಟ್ಟಣದಲ್ಲಿ ಅಕ್ರಮ ಗೋಸಾಗಾಟ ಅವ್ಯಾಹತವಾಗಿದೆ. ಈ ಬಗ್ಗೆ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಮೌನ ವಹಿಸಿದ್ದು, ಇದನ್ನು ತಡೆಯಹೊರಟ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಪೊಲೀಸರು ಅಸಹಕಾರ ತೋರುತ್ತಿದ್ದಾರೆ. ಇನ್ನಾದರೂ ಈ ರೀತಿ ಅಕ್ರಮ ಗೋಸಾಗಾಟ ದಂಧೆ ತಡೆಯುವ ನಿಟ್ಟಿನಲ್ಲಿ ನಿಗಾವಹಿಸಬೇಕು ಎಂದು ಭಜರಂಗದಳ ಸಂಘಟನೆಯ ತಾಲೂಕು ಸಂಯೋಜಕ ಮಹಾಂತೇಶ ಗೋಡಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಾದ ನವೀನ ಕುಂಬಾರ, ಈರಣ್ಣ ಚಿಲ್ಲೂರಮಠ, ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಮುತ್ತು ಕರ್ಜಕಣ್ಣನವರ, ಸಚಿನ ದನದಮನಿ ಇದ್ದರು.