ಗದಗ:- ಅಂಬೇಡ್ಕರ್ ಅಂತಾ ಹೇಳುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಇದೇ ಮಾತು ಕಾಂಗ್ರೆಸ್‌ನವರಿಗೆ ಅಸ್ತ್ರವಾಗಿದೆ. ದೇಶಾದ್ಯಂತ ಪ್ರತಿಭಟನೆ ಕಿಡಿ ಹೊತ್ತಿಸಿದೆ.
ಇತ್ತ ಕರ್ನಾಟಕದಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಅಮಿತ್ ಶಾ ಹೇಳಿಕೆ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳಿಂದ ಇಂದು ಗದಗ ಬಂದ್ಗೆ ಕರೆ ನೀಡಲಾಗಿದೆ. ದಲಿತ ಸಂಘರ್ಷ ಸಮಿತಿ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆಯಿಂದ ಬಂದ್ ಗೆ ಕರೆ ಕೊಡಲಾಗಿದೆ. ಇಂದು ಬೆಳಿಗ್ಗೆ 6 ಘಂಟೆಯಿಂದ ಸಂಜೆ 5 ಘಂಟೆ ವರೆಗೆ ಬಂದ್ ಇರಲಿದ್ದು, ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಲಿದ್ದಾರೆ.
ಇನ್ನೂ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಂದ್ ಕರೆ ಹಿನ್ನೆಲೆ ಬಸ್ ಗಳು ನಗರ ಪ್ರವೇಶಿಸದಂತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಗದಗ ನಗರದ ಮುಳಗುಂದ ನಾಕಾದಲ್ಲಿ ಬೆಳ್ಳಂ ಬೆಳಗ್ಗೆ ಪ್ರತಿಭಟನಾಕಾರರು ಜಮಾವಣೆಗೊಳ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಈಗಾಗಲೇ ಗದಗ ನಗರದ ಮುಳಗುಂದ ನಾಕಾದಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಅಮಿತ್ ಶಾ ವಿರುಧ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಕೂಡಲೇ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಬಂದ್ ಹಿನ್ನೆಲೆ, ಈಗಾಗಲೇ ಪ್ರತಿಭಟನೆ ಆರಂಭವಾಗಿದ್ದು, ಗದಗ ನಗರದ ಮುಳಗುಂದ ನಾಕಾದಲ್ಲಿ ಪ್ರತಿಭಟನಾಕಾರರು ಟಯರ್ ತಂದಿದ್ದಾರೆ. ಟಯರ್ ತರ್ತಿದ್ದಂತೆ ಪೊಲೀಸ್ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಟಯರ್ ತೆಗೆದುಕೊಂಡು ಹೋಗಿದ್ದಾರೆ.
ಬಂದ್ ಕರೆ ಹಿನ್ನೆಲೆ ಗದಗ ನಗರದ ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಈ ವೇಳೆ ಅಮಿತ್ ಶಾ ವಿರುಧ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಬದುಕು ಅಂಬೇಡ್ಕರ್, ನಮ್ಮ ಉಸಿರು, ನಮ್ಮ ಸ್ವಾಭಿಮಾನ ಅಂಬೇಡ್ಕರ್ ಅಂತಾ ಘೋಷಣೆ ಕೂಗಿದ್ದಾರೆ.
ಇಂದು ನಡೆಯುತ್ತಿರುವ ಗದಗ ಬಂದ್ ಕರೆಗೆ ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿ ಬೆಂಬಲ ಸೂಚಿಸಿದೆ. ಬೆಂಬಲ ಘೋಷಣೆ ಮಾಡಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ ಎಸ್ ಪಾಟೀಲ್ ಅವರು, ಬಹಿರಂಗ ಪತ್ರ ಬರೆದಿದ್ದು, ಬಂದ್ ಗೆ ಬೆಂಬಲಿಸಿ ಭಾಗವಹಿಸುವುದಾಗಿ ಪತ್ರದ ಮುಖೇನ ಹೇಳಿದ್ದಾರೆ.
ಇನ್ನೂ ದಲಿತ ಸಂಘಟನೆಗಳ ಒಕ್ಕೂಟದಿಂದ ಮುಳಗುಂದ ನಾಕಾ ಬಳಿ ಧರಣಿ ನಡೆಯುತ್ತಿದ್ದು, ರಸ್ತೆ ಬಂದ್ ಮಾಡಿ ಸಂಘಟನೆ ಕಾರ್ಯಕರ್ತರು ಪ್ರೊಟೆಸ್ಟ್ ಮಾಡುತ್ತಿದ್ದಾರೆ.
ಈ ವೇಳೆ ಕೇಂದ್ರ ಸರ್ಕಾರ ಹಾಗೂ ಸಚಿವ ಶಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಂಬೇಡ್ಕರ್.. ಅಂಬೇಡ್ಕರ್ ಘೋಷಣೆ ಕೂಗಿ ಅಮಿತ್ ಶಾ ವಿರುದ್ಧ ಆಕ್ರೋಶ ಹೊರ ಹಾಕಿರುವ ದೃಶ್ಯ ಕಂಡು ಬಂದಿದೆ. ಮತ್ತೊಂದೆಡೆ ಬಂದ್ ಗೆ ಬೆಂಬಲಸಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ.
ಗದಗ-ಬೆಟಗೇರಿ ಪ್ರಮುಖ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಅಮಿತ್ ಶಾ ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡಲಾಗುತ್ತದೆ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.ಇದು ಸಾಂಕೇತಿಕ ಹೋರಾಟ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಗದಗ ನಗರದ ಮುಳಗುಂದ ನಾಕಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ಹೊರ ಹಾಕಿರುವ ಪ್ರತಿಭಟನಾಕಾರರು, ಕೇಂದ್ರ ಗೃಹ ಸಚಿವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದ್ದಾರೆ.
ಪ್ರತಿಭಟನಾ ನಿರತರಿಂದ ಅಮಿತ್ ಶಾ ಭಾವ ಚಿತ್ರಕ್ಕೆ ಚಪ್ಪಲಿ ಏಟು ಹೊಡೆದು, ಬಳಿಕ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಕೆಲ ದಲಿತ ಮುಖಂಡರು, ಅಮಿತ್ ಶಾ ಭಾವಚಿತ್ರ ಹರಿದು ಬಾಯಿ ಬಡೆದುಕೊಂಡಿದ್ದಾರೆ.
ಈ ವೇಳೆ ಭಾವಚಿತ್ರ ಸುಡುತ್ತಿದ್ದ ಮುಖಂಡರನ್ನು ತಡೆಯಲು ಪೊಲೀಸರು ಮುಂದಾದರು. ಆದರೂ ಖಾಕಿಯಿಂದ ತಪ್ಪಿಸಿಕೊಂಡು ಡಿಎಸ್ ಎಸ್ ಸದಸ್ಯರು, ಅಮಿತ್ ಶಾರ ಭಾವಚಿತ್ರ ಸುಟ್ಟಿದ್ದಾರೆ.ಬಂದ್ ಕರೆ ಹಿನ್ನೆಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.