ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಇತ್ತೀಚೆಗೆ ಬೆಂಗಳೂರು ಶಿವಾಜಿನಗರದ ಶಮ್ಸ್ ಕಲ್ಯಾಣ ಮಂಟಪದಲ್ಲಿ ಕೆಲವು ಪುಂಡರು ಮದುವೆ ಕಾರ್ಯನಿರತ ಛಾಯಾಗ್ರಾಹಕರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ತಾಲೂಕು ಆಡಳಿತಸೌಧದ ಮುಂಭಾಗದಲ್ಲಿ ಹುಬ್ಬಳ್ಳಿ ಫೋಟೊ ಮತ್ತು ವಿಡಿಯೋಗ್ರಾಫರ್ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಹುಬ್ಬಳ್ಳಿ ಶಹರ ತಹಸೀಲ್ದಾರ ಕಲಗೌಡ ಪಾಟೀಲ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಕಿರಣ ಬಾಕಳೆ ಮಾತನಾಡಿ, ಮದುವೆ ಕಾರ್ಯದಲ್ಲಿ ನಿರತರಾದ ವಿಡಿಯೋಗ್ರಾಫರ್ ಮೇಲೆ ಮಾಡಿರುವುದು ಖಂಡನೀಯ. ಅವರ ಕ್ಯಾಮರಾ ಸಲಕರಣೆಗಳನ್ನು ಸಹ ನಾಶ ಮಾಡಿದ್ದಾರೆ.
ಹೊಟ್ಟೆಪಾಡಿಗಾಗಿ ಪೋಟೋ ಹಾಗೂ ವಿಡಿಯೋ ಮಾಡುವ ಛಾಯಾಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಅಮಾನವೀಯ ಘಟನೆಯಾಗಿದೆ. ಇದರಿಂದ ಛಾಯಾಗ್ರಾಹಕರಿಗೆ ಯಾವುದೇ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಈ ಘಟನೆಯು ನಾಡಿನ ಸಮಸ್ತ ವೃತ್ತಿಪರ ಛಾಯಾಚಿತ್ರಗ್ರಾಹಕರ ಮೇಲೆ ತೀವ್ರತರವಾದ ಆಘಾತವನ್ನು ಉಂಟು ಮಾಡಿದ್ದು, ಛಾಯಾಗ್ರಾಹಕರ ಕುಟುಂಬಗಳು ತುಂಬಾ ನೋವನ್ನು ಅನುಭವಿಸುವಂತಾಗಿವೆ.
ಸಾಕಷ್ಟು ಕಲ್ಯಾಣ ಮಂಟಪದಲ್ಲಿ ಕ್ಯಾಮರಾ ಪರಿಕರಗಳ ಕಳ್ಳತನ, ಸ್ಟುಡಿಯೊಗಳಲ್ಲಿ ಕಳ್ಳತನ, ಛಾಯಾಗ್ರಾಹಕರನ್ನು ರಸ್ತೆ ಬದಿಗಳಲ್ಲಿ ತಡೆದು ಕ್ಯಾಮರಾ ಪರಿಕರಗಳನ್ನು ಕಿತ್ತುಕೊಂಡು ಹೋದ ಅನೇಕ ಪ್ರಕರಣಗಳು ನಡೆದಿವೆ, ನಡೆಯುತ್ತಲೇ ಇವೆ. ಆದ್ದರಿಂದ, ಎಲ್ಲ ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲು ಆದೇಶಿಸಬೇಕು. ಛಾಯಾಗ್ರಾಹಕರಿಗೂ ಸರಕಾರದ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಸೇರಿಸಿ ಅನುದಾನವನ್ನು ಬಿಡುಗಡೆ ಮಾಡಿ, ಅವರ ಕುಟುಂಬಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ದಿನೇಶ್ ದಾಬಡೆ, ಕಾರ್ಯದರ್ಶಿ ರವೀಂದ್ರ ಕಾಟಿಗರ, ಖಜಾಂಚಿ ಅನಿಲ್ ತುರಮರಿ, ಸದಸ್ಯರಾದ ವಿನಾಯಕ್ ಸಫಾರೆ, ಪ್ರವೀಣ ಹಣಗಿ, ಶಂಕರ್ ಮಿಸ್ಕಿನ್, ಆನಂದ ರಾಜೊಳ್ಳಿ, ವಿಜಯ್ ಮೆಹರ್ವಾಡೆ, ಪ್ರಕಾಶ್ ಬಸವ, ವಜೀರ್ ಗೋಪಂಕಪ್ಪ, ರಶೀದ್, ರಾಕೇಶ್ ಪವಾರ್, ಸುಜಾತಾ ಪೋತದಾರ, ಅಲ್ಲಾಬಕ್ಷ ಅಧೋನಿ, ಆನಂದ್ ಮೆಹರ್ವಾಡೆ, ಕೃಷ್ಣ ಪೂಜಾರಿ ಸೇರಿದಂತೆ ಇತರರು ಹಾಜರಿದ್ದರು.
ಸದರಿ ಪ್ರಕರಣವನ್ನು ಕರ್ನಾಟಕ ಸರಕಾರ ಗಂಭೀರವಾಗಿ ಪರಿಗಣಿಸಿ ವೃತ್ತಿನಿರತ ಛಾಯಾಗ್ರಾಹಕರಿಗೆ ರಕ್ಷಣೆ ನೀಡಬೇಕು. ಹಲ್ಲೆ ಮಾಡಿರುವ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಲ್ಲೆಗೊಳಗಾದ ಛಾಯಾಗ್ರಾಹಕನಿಗೆ ರಾಜ್ಯ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು. ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ಸರಕಾರ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಕಿರಣ ಬಾಕಳೆ ಒತ್ತಾಯಿಸಿದರು.