ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಆದರಹಳ್ಳಿ ಗ್ರಾಮದಲ್ಲಿ ಕಳೆದ 2-3 ದಿನಗಳ ಹಿಂದೆ ಸಣ್ಣ ವಿಷಯಕ್ಕೆ ಬೋವಿ ಮತ್ತು ಲಂಬಾಣಿ ಸಮಾಜದ ಯುವಕರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆದರಹಳ್ಳಿ ಗವಿಸಿದ್ದೇಶ್ವರ ಮಠದ ಕುಮಾರ ಮಹಾರಾಜರಿಗೆ ಜೀವ ಬೆದರಿಕೆ ಹಾಕಿರುವ ಮತ್ತು ಸಮಾಜದ ಯುವಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಕುಮಾರ ಮಹಾರಾಜರು ನೂರಾರು ಭಕ್ತರೊಂದಿಗೆ ರವಿವಾರ ಮುಂಜಾನೆಯಿಂದಲೇ ಆದರಹಳ್ಳಿ ಗ್ರಾಮದಲ್ಲಿ ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಶ್ರೀಗಳು ಮಾತನಾಡಿ, ಆದರಹಳ್ಳಿ ಗ್ರಾಮದಲ್ಲಿ ಭೋವಿ, ಲಂಬಾಣಿ, ಮುಸ್ಲಿಂ ಸೇರಿದಂತೆ ಎಲ್ಲ ಸಮಾಜಗಳ ಬಾಂಧವರು ಹೊಂದಾಣಿಕೆಯಿಂದ ಇದ್ದಾರೆ. ಮೊನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಲಂಬಾಣಿ ಸಮಾಜದ ಯುವಕರ ಮೇಲೆ ಭೋವಿ ಸಮಾಜದ ಯುವಕರು ಹಲ್ಲೆ ಮಾಡಿದ್ದು, ಈ ವೇಳೆ ವೃದ್ಧರು, ಮಹಿಳೆಯರ ಮೇಲೆ ಹಲ್ಲೆ ನಡೆದಿದೆ. ಈ ಸಂದರ್ಭದಲ್ಲಿ ತಾವು ಬೇರೆ ಊರಲ್ಲಿ ಇದ್ದರೂ ಸಹ ನನಗೆ ಭೋವಿ ಸಮಾಜದ ಕೆಲ ಮುಖಂಡರು ಫೋನ್ ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದು, ಈ ಗಲಾಟೆಯ ವಿಷಯದಲ್ಲಿ ಮಧ್ಯೆ ಬರದಂತೆ ತಾಕೀತು ಮಾಡಿ ಬೆದರಿಸುತ್ತಿದ್ದಾರೆ.
ಈ ವಿಷಯದಲ್ಲಿ ನಾವು ಬೋವಿ ಸಮಾಜದ ವಿರುದ್ಧ ಹೋರಾಟ ಮಾಡುತ್ತಿಲ್ಲ. ಸಮಾಜದೊಳಗೆ ಇರುವ ಕೆಲ ವ್ಯಕ್ತಿಗಳು ಸಮಾಜಕ್ಕೆ ಚ್ಯುತಿ ತರುವಂತಹ ಕಾರ್ಯವನ್ನು ಮಾಡುತ್ತಿದ್ದು, ಅಂತವರ ವಿರುದ್ಧ ನಮ್ಮ ಹೋರಾಟ ನಡೆಯುತ್ತದೆ ಎಂದರು.
ಗೋರ ಸೇನಾ ರಾಜ್ಯಾಧ್ಯಕ್ಷ, ಬಂಜಾರ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ ಹಾಗೂ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಮಾತನಾಡಿ, ಶ್ರೀಮಠದ ಪೂಜ್ಯರು ಎಲ್ಲ ಸಮಾಜಗಳೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವದವರಾಗಿದ್ದಾರೆ. ಅವರ ಸೌಮ್ಯ ಸ್ವಭಾವವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವದು ಸಲ್ಲದು. ಇಂತಹ ಘಟನೆಗಳಿಂದ ಊರಿನ ವಾತಾವರಣ ಹದಗೆಡುವಂತಾಗುತ್ತದೆ. ದಬ್ಬಾಳಿಕೆ, ಧಮಕಿ ನೀಡುವಂತ ವ್ಯಕ್ತಿಗಳ ಮೇಲೆ ಕ್ರಮವಾಗಬೇಕು, ಇಂತಹ ಘಟನೆಗಳು ಮರುಕಳಿಸಬಾರದು. ಪೊಲೀಸರು ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಂಕರಗೌಡ ಪಾಟೀಲ್, ಮಹಾಂತಗೌಡ ಪಾಟೀಲ್, ಮಂಜಪ್ಪ ಸುಣಗಾರ, ಪರಶುರಾಮ ನಾಯಕ, ಶೇಖಪ್ಪ ಲಮಾಣಿ, ನಾಗೇಶ ಲಮಾಣಿ, ಶೇಖಪ್ಪ ನಾಯಕ, ನರಸಪ್ಪ ಡಾವ, ಲಕ್ಷ್ಮಣ ನಾಯಕ, ಕಾಶಪ್ಪ ಲಮಾಣಿ, ಶಾರವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಪ್ರೇಮಾ ಲಮಾಣಿ, ಬಾವವ್ವ ಲಮಾಣಿ, ಸಮಸ್ತ ಡಾವ ಕಾರಬಾರಿ ನಾಯಕ, ಗುರು-ಹಿರಿಯರು ಇದ್ದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ರಾಘವೇಂದ್ರ ಧಾರವಾಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಶ್ರೀಗಳ ಕ್ಷಮೆ ಯಾಚಿಸಿ, ಭೋವಿ ಮತ್ತು ಲಂಬಾಣಿ ಸಮಾಜದವರು ಮೊದಲಿನಿಂದಲೂ ಹೊಂದಾಣಿಕೆಯಿಂದ ಹೋಗುತ್ತಿದ್ದು, ಇದೀಗ ನಡೆದ ಘಟನೆಯಿಂದ ಪೂಜ್ಯರಿಗೆ ನೋವಾಗಿದೆ. ಇದು ಮುಂದುವರೆಯುವದು ಬೇಡ. ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು.