ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ಸರ್ಕಾರ ನೌಕರರ 7ನೇ ವೇತನ ಅನುಷ್ಠಾನ, ಎನ್‌ಪಿಎಸ್ ರದ್ದುಪಡಿಸುವುದು ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಕನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ರವಿ ಗುಂಜೀಕರ ಮಾತನಾಡಿ, ಸರಕಾರಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮೊದಲನೇ ಹಂತದಲ್ಲಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಜುಲೈ 29ರಿಂದ ರಾಜ್ಯಾದ್ಯಂತ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 2.60 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರವು ಜನಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜೊತೆಗೆ ರಾಜ್ಯದ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆಯಲ್ಲಿ ಮತ್ತು ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರು ಪಾತ್ರ ಪ್ರಮುಖವಾಗಿದೆ. ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
2.60 ಲಕ್ಷ ಖಾಲಿ ಹುದ್ದೆಗಳಿಂದ ಸುಮಾರು 18 ಸಾವಿರ ಕೋಟಿ ರೂ ಸರ್ಕಾರಕ್ಕೆ ಉಳಿತಾಯವಾಗಲಿದೆ. ಅಷ್ಟು ಹುದ್ದೆಗಳ ಜವಾಬ್ದಾರಿಯನ್ನು ಈಗಾಗಲೇ ಸರ್ಕಾರ ನೌಕರರು ನಿಭಾಯಿಸುತ್ತಿರುವುದರಿಂದ 7ನೇ ವೇತನವನ್ನು ಅನುಷ್ಠಾನಗೊಳಿಸಬೇಕು. ಈ ಹಿಂದೆ ರಾಜ್ಯ ಸರ್ಕಾರವು ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ತರುವ ಭರವಸೆಯನ್ನು ನೀಡಿತ್ತು. 13 ತಿಂಗಳು ಕಳೆದರೂ ಈವರೆಗೂ ಅದನ್ನು ಜಾರಿಗೆ ತಂದಿಲ್ಲ. ಅಲ್ಲದೇ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿದ್ದು, ಅದನ್ನು ಸದ್ಯದ ಸರ್ಕಾರ ಲೋಕಾರ್ಪಣೆ ಮಾಡಬೇಕಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜು. 29ರಂದು ಎಲ್ಲ ಸರ್ಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ, ಆರೋಗ್ಯ ಇಲಾಖೆಯಲ್ಲಿ ನೌಕರರು ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತ ಕಪ್ಪು ಬಟ್ಟೆಯೊಂದಿಗೆ ಅನಿರ್ದಿಷ್ಟವಾಗಿ ಪ್ರತಿಭಟನೆ ಮಾಡಲಿದ್ದಾರೆ ಎಂದು ರವಿ ಗುಂಜೀಕರ ಹೇಳಿದರು.
ನಂತರ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಈ ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಬಸವರಾಜ ಬಳ್ಳಾರಿ, ಪಿ.ಎಚ್. ಕಡಿವಾಲ, ಕೆ.ಬಿ. ಕೊಣ್ಣೂರ, ಎಸ್.ಆರ್. ಕಟ್ಟಿಮನಿ, ಬಿ.ಎಂ. ಹಿರೇಮಠ, ಡಿ.ಎಸ್. ದುರ್ಗಣ್ಣವರ, ಶ್ರೀಶೈಲ್ ಬಿರಕಬ್ಬಿ, ಬಿ.ಎಮ್. ಪೂಜಾರ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಉಪಸ್ಥಿತರಿದ್ದರು.
7ನೇ ವೇತನ ಆಯೋಗ ರಚನೆಯಾಗಿ 19 ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಕೂಡಲೇ 7ನೇ ವೇತನ ಆಯೋಗವು ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಆದೇಶ ಹೊರಡಿಸಬೇಕು. ಎನ್‌ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ರವಿ ಗುಂಜೀಕರ ಒತ್ತಾಯಿಸಿದರು.