ಸ್ಲಂ ನಿವಾಸಿಗಳಿಂದ ಪ್ರತಿಭಟನೆ

0
slum
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರದಲ್ಲಿಯ ಸ್ಲಂ ಪ್ರದೇಶಗಳ ಅಭಿವೃದ್ಧಿ, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆಗೆ ಮತ್ತು ವಸತಿ ಸೌಲಭ್ಯ ಕಲ್ಪಿಸುವಲ್ಲಿ ಸ್ಲಂ ಬೋರ್ಡ ಅಧಿಕಾರಿಗಳು ನಿರ್ಲಕ್ಷ್ಯ ಮತ್ತು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಜಿಲ್ಲಾಡಳಿತ ಮತ್ತು ಸ್ಲಂ ಬೋರ್ಡ್ ಅಧಿಕಾರಿಗಳು ಕೊಳಗೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಗದಗ-ಬೆಟಗೇರಿ ನಗರದ ಅನೇಕ ಅಘೋಷಿತ ಗುಡಿಸಲು ಪ್ರದೇಶಗಳನ್ನು ಘೋಷಣೆಗಾಗಿ ಸ್ಥಳೀಯ ನಿವಾಸಿಗಳ ಎಲ್ಲಾ ದಾಖಲೆಗಳೊಂದಿಗೆ ಹಾಗೂ ನಗರಸಭೆಯಿಂದ ನೀಡಲಾಗಿರುವ ಠರಾವು ಪ್ರತಿ ಮತ್ತು ನಿರಾಕ್ಷೇಪಣಾ ಪತ್ರದೊಂದಿಗೆ ಅರ್ಜಿಗಳನ್ನು ಸಲ್ಲಿಸಿ 3 ವರ್ಷ ಕಳೆದರೂ ಸಹ ಈವರೆಗೊ ಸ್ಲಂ ಘೋಷಣೆ ಕುರಿತು ಸ್ಲಂ ಬೋರ್ಡ್ನಿಂದ ಅಗತ್ಯ ಕ್ರಮ ಕೈಗೊಳ್ಳದೇ ಸ್ಲಂ ಜನ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ಕಚೇರಿಯ ಸಿಬ್ಬಂದಿಗಳು ಸ್ಲಂ ಪ್ರದೇಶದ ವಸತಿ ಹಕ್ಕು ಪತ್ರ ಹಾಗೂ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕುಮ್ಮಕ್ಕು ನೀಡುತ್ತಿರುವುದರಿಂದ ಈವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಹಾಗೂ ಅಭಿವೃದ್ಧಿ ಯೋಜನೆಗಳು ನೈಜ ಕೊಳಗೇರಿ ಪ್ರದೇಶಗಳಿಗೆ ಬಳಕೆಯಾಗದೇ ಇರುವುದು ಜೀವಂತ ಉದಾಹರಣೆಯಾಗಿದೆ. ಸರ್ಕಾರಗಳು ಜಾರಿಗೆ ತರುವ ವಸತಿ ಹಾಗೂ ವಿವಿಧ ಯೋಜನೆಗಳು ಪ್ರಾಮಾಣಿಕವಾಗಿ ನೈಜ ಗುಡಿಸಲು ಪ್ರದೇಶದ ಕುಟುಂಬಗಳಿಗೆ ದೊರಕಿಸಿಕೊಡಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ನಮ್ಮ ಸಂಘಟನೆಯ ಮೂಲಕ ಖಂಡಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಸ್ಲಂ ಸಮಿತಿ ಮುಖಂಡರಾದ ಮೆಹಬೂಬಸಾಬ ಬಳ್ಳಾರಿ, ಇಬ್ರಾಹಿಮ ಮುಲ್ಲಾ, ಮೆಹರುನಿಸಾ ಢಾಲಾಯತ, ಮೆಹರುನಿಸಾ ಡಂಬಳ, ಮಲೇಶಪ್ಪ ಕಲಾಲ, ಸಲೀಮ ಹರಿಹರ, ಖಾಜೇಸಾಬ ಇಸ್ಮಾಯಿಲನವರ ಸಾಕ್ರುಬಾಯಿ ಗೋಸಾವಿ, ಬಾಷಾಸಾಬ ಡಂಬಳ, ದಾದು ಗೋಸಾವಿ, ಶಿವಪ್ಪ ಲಕ್ಕುಂಡಿ, ಸಲೀಮ ಬೈರಕದಾರ, ಚಂದ್ರಿಕಾ ರೋಣದ, ಮಂಜುನಾಥ ಶ್ರೀಗಿರಿ, ಅಫ್ರೋಜಾ ಹುಬ್ಬಳ್ಳಿ, ಶೊಸೀಲಮ್ಮ ಗೊಂದರ, ಫೈರುಜಾ ಹುಬ್ಬಳ್ಳಿ, ತಿಪ್ಪಮ್ಮ ಕೊರವರ, ಕೌಸರ ಬೈರಕದಾರ, ವಿಶಾಲಾಕ್ಷಿ ಹಿರೇಗೌಡ್ರ, ನಗೀನಾ ಯಲಿಗಾರ, ಪೀರಮ್ಮ ನದಾಫ, ಜೈತುನಬಿ ಶಿರಹಟ್ಟಿ, ಲಕ್ಷ್ಮಿ ಮಣವಡ್ಡರ, ಶೋಭಾ ಹಿರೇಮಠ, ಮಕ್ತುಮಸಾಬ ಮುಲ್ಲಾನವರ, ದುರ್ಗಪ್ಪ ಮಣ್ಣವಡ್ಡರ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶೀಘ್ರವೇ ಸ್ಲಂ ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸ್ಲಂ ನಿವಾಸಿಗಳೊಂದಿಗೆ ಗದಗ ಉಪ ವಿಭಾಗ ಸ್ಲಂ ಬೋರ್ಡ್ ಕಛೇರಿ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಮನವಿ ಸಲ್ಲಿಸಿದರು.


Spread the love

LEAVE A REPLY

Please enter your comment!
Please enter your name here