ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯ ಸ್ಲಂ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳು ಕಳಪೆಯಾಗಿದೆ ಹಾಗೂ ವಸತಿ ಯೋಜನೆಯ ಅನುದಾನದಲ್ಲಿ ಭಾರೀ ಭ್ರಷ್ಟಾಚಾರ ನಡೆಸಿರುವ ಸ್ಲಂ ಬೋರ್ಡ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ಟಿಪ್ಪು ಸುಲ್ತಾನ ಸರ್ಕಲ್‌ನಿಂದ ಬೃಹತ್ ರ‍್ಯಾಲಿಯನ್ನು ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಜಿಲ್ಲಾಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಪ್ರಧಾನಮಂತ್ರಿಗಳ ಆವಾಸ್ ಯೋಜನೆಡಿಯಲ್ಲಿ ಗದಗ-ಬೆಟಗೇರಿ ನಗರದಲ್ಲಿ 863 ಮನೆಗಳನ್ನು ಹಾಗೂ ಗದಗ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ನೂರಾರು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಮಾಗಾರಿಯ ಅನುದಾನದಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳು, ಕೆಲ ಸಿಬ್ಬಂದಿಗಳು ಮತ್ತು ಗುತ್ತಿಗೆದಾರರು ಸೇರಿ ಭಾರಿ ಭ್ರಷ್ಟಾಚಾರವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.
ಈ ಹೋರಾಟವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸ್ಲಂ ಜನರ ವಿರೋಧಿ ಹಾಗೂ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಬೇಕು.ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಮನವಿಯ ಮೂಲಕ ಎಚ್ಚರಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿಯ ಪದಾಧಿಕಾರಿಗಳಾದ ರವಿಕುಮಾರ ಬೆಳಮಕರ, ಅಶೋಕ ಕುಸಬಿ, ದುರ್ಗಪ್ಪ ನವಲಗುಂದ, ಮೆಹರುನಿಸಾ ಢಾಲಾಯತ, ಶಂಕ್ರಪ್ಪ ರೋಣ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಮಕ್ತುಮ ಮುಲ್ಲಾನವರ, ಇಬ್ರಾಹಿಂ ಮುಲ್ಲಾ, ಮಲೇಶಪ್ಪ ಕಲಾಲ, ಪ್ರಕಾಶ ಹಡಗಲಿ, ಮೌಲಾಸಾಬ ಗಚ್ಚಿ, ಗೌಸಸಾಬ ಅಕ್ಕಿ, ಮೆಹಬೂಸಾಬ ಬಳ್ಳಾರಿ, ರೇವಣಪ್ಪ ಲಕ್ಕುಂಡಿ, ಖಾಜಾಸಾಬ ಬಳ್ಳಾರಿ, ನಜಮುನಿಸಾ ಮುರಗೋಡ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ದುರ್ಗಪ್ಪ ಮಣ್ಣವಡ್ಡರ, ರವಿ ಗೋಸಾವಿ, ಮಂಜುನಾಥ ಶ್ರೀಗಿರಿ, ಶಿವಾನಂದ ಶಿಗ್ಲಿ, ಸಲೀಮ ಬೈರಕದಾರ, ದಾವಲ ಯಾದಗೇರಿ, ಮಮ್ತಾಜ ಕರಮುಡಿ ಸೇರಿದಂತೆ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈವರಗೊ ಜಿಲ್ಲಾಡಳಿತದಿಂದ ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೇ ಇರುವುದನ್ನು ನಾವು ಖಂಡಿಸುತ್ತೇವೆ. ಗದಗ-ಬೆಟಗೇರಿ ನಗರದ ಅನೇಕ ಅಘೋಷಿತ ಗುಡಿಸಲು ಪ್ರದೇಶಗಳನ್ನು ಘೋಷಣೆಗಾಗಿ ಸ್ಥಳೀಯ ನಿವಾಸಿಗಳ ಎಲ್ಲಾ ದಾಖಲೆಗಳೊಂದಿಗೆ ಹಾಗೂ ನಗರಸಭೆಯಿಂದ ನೀಡಲಾಗಿರುವ ಠರಾವು ಪ್ರತಿ ಮತ್ತು ನಿರಾಕ್ಷೇಪಣಾ ಪತ್ರದೊಂದಿಗೆ ಅರ್ಜಿಗಳನ್ನು ಸಲ್ಲಿಸಿ 3 ವರ್ಷಗಳಾದರೂ ಸಹ ಈವರೆಗೊ ಸ್ಲಂ ಘೋಷಣೆ ಕುರಿತು ಸ್ಲಂ ಬೋರ್ಡ್ನಿಂದ ಅಗತ್ಯ ಕ್ರಮ ಕೈಗೊಳ್ಳದೇ ಸ್ಲಂ ಜನರ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.